ಮುಝಫ್ಫರನಗರ್ ದಂಗೆ ಪ್ರಕರಣ: 12 ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಕೋರ್ಟ್ ಅನುಮತಿ

ಮುಝಫ್ಫರನಗರ್: ಮುಝಫ್ಫರನಗರ್ ದಲ್ಲಿ 2013ರಲ್ಲಿ ನಡೆದ ದಂಗೆಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಚಿವ ಸುರೇಶ್ ರಾಣಾ, ಬಿಜೆಪಿ ಶಾಸಕ ಸಂಗೀತ್ ಸೋಮ್, ಮಾಜಿ ಬಿಜೆಪಿ ಸಂಸದ ಭರತೇಂದು ಸಿಂಗ್ ಹಾಗೂ ವಿಹಿಂಪ ನಾಯಕಿ ಸಾಧ್ವಿ ಪ್ರಾಚಿ ಸಹಿತ 12 ಬಿಜೆಪಿ ನಾಯಕರ ವಿರುದ್ಧ ಹಿಂಸೆಗೆ ಪ್ರೇರೇಪಣೆ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ವಾಪಸ್ ಪಡೆಯಲು ಸ್ಥಳೀಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಮ್ ಸುಧ್ ಸಿಂಗ್ ಅನುಮತಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘನೆ, ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿ ಹಾಗೂ ಅಕ್ರಮ ದಿಗ್ಬಂಧನ ಆರೋಪಗಳನ್ನು ಎದುರಿಸುತ್ತಿದ್ದ ಈ 12 ಮಂದಿಯ ವಿರುದ್ಧ ಐಪಿಸಿಯ ವಿವಿಧ ಸೆಕ್ಷನುಗಳನ್ವಯ ಪ್ರಕರಣ ದಾಖಲಿಸಲಾಗಿತ್ತು. ಆಗಸ್ಟ್ 2013ರಲ್ಲಿ ನಡೆದಿದ್ದ ಮಹಾಪಂಚಾಯತ್‍ನಲ್ಲಿ ಭಾಗವಹಿಸಿದ್ದ ಈ ಆರೋಪಿಗಳು ತಮ್ಮ ಭಾಷಣಗಳ ಮೂಲಕ ಹಿಂಸೆಯನ್ನು ಪ್ರಚೋದಿಸಿದ್ದರು ಎಂದೂ ಆರೋಪಿಸಲಾಗಿತ್ತು.
ಸಾರ್ವಜನಿಕ ಹಿತದೃಷ್ಟಿಯಿಂದ ಈ 12 ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಇರುವ ಕುರಿತಂತೆ ಉತ್ತರ ಪ್ರದೇಶ ಸರಕಾರ ನಿರ್ಧರಿಸಿರುವುದರಿಂದ ಅವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಅನುಮತಿಸಬೇಕು ಎಂದು ಸರಕಾರದ ಪರ ವಕೀಲ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರು.
ಮುಝಫ್ಫರನಗರ್ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ 2013ರಲ್ಲಿ ನಡೆದ ಮತೀಯ ಹಿಂಸಾಚಾರದಲ್ಲಿ 62 ಮಂದಿ ಬಲಿಯಾಗಿದ್ದರಲ್ಲದೆ 50,000ಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದರು.





