ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.31ಕ್ಕೆ ಬೆಳಗಾವಿಯಲ್ಲಿ ‘ರೈತ ಮಹಾ ಪಂಚಾಯತ್'
ಇದು ದುಡಿಯುವ ವರ್ಗ- ಲೂಟಿಕೋರರ ನಡುವಿನ ಹೋರಾಟ: ಚುಕ್ಕಿ ನಂಜುಂಡಸ್ವಾಮಿ

ಬೆಂಗಳೂರು, ಮಾ. 27: ‘ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಮಾ.31ಕ್ಕೆ ಬೆಳಗಾವಿಯಲ್ಲಿ ‘ರೈತ ಮಹಾ ಪಂಚಾಯತ್' ಸಮಾವೇಶವನ್ನು ಏರ್ಪಡಿಸಲಾಗಿದ್ದು, ಇದು ದುಡಿಯುವ ವರ್ಗ ಮತ್ತು ಲೂಟಿಕೋರರ ನಡುವಿನ ಹೋರಾಟ' ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳ ಬಗ್ಗೆ ರೈತರು ಎಚ್ಚೆತ್ತುಕೊಳ್ಳದಿದ್ದರೆ ಬಹುಶಃ ನಾವು ದೇಶದ್ರೋಹಿಗಳಾಗುತ್ತೇವೆ. ಹೀಗಾಗಿ ಮಾ.31ರಂದು ಬೆಳಗಾವಿಯಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರದ ರಾಜಧಾನಿ ದಿಲ್ಲಿ ಸೇರಿದಂತೆ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಅದೇ ರೀತಿ ಮಾ.31ರಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ರೈತ ಮಹಾ ಪಂಚಾಯತ್ ಸಮಾವೇಶವನ್ನು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತ ಪರ ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನಾಲ್ಕು ತಿಂಗಳಿಂದ ಈ ಚಳುವಳಿ ನಡೆಯುತ್ತಿದೆ, ಸುಮಾರು 300ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ. ವಯಸ್ಸಾದವರು ಹೋರಾಟ ಮಾಡುತ್ತಿದ್ದಾರೆ. ಆದರೆ, ಸೌಜನ್ಯಕ್ಕಾದರೂ ಹೋರಾಟಗಾರರಿಗೆ ಸ್ಪಂದಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ. ಇದು ನಮಗೆ ಎಚ್ಚರಿಕೆಯಾಗಬೇಕು ಎಂದರು.
ಉತ್ತರ ಕರ್ನಾಟಕ ಮತ್ತು ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತ್ಯಂತ ಪ್ರಮುಖ ಸ್ಥಳ. ಅಷ್ಟೇ ಅಲ್ಲದೆ, ಮಹಾರಾಷ್ಟ್ರ ರಾಜ್ಯಕ್ಕೆ ಗಡಿ ಹಂಚಿಕೊಂಡಿರುವ ಹಿನ್ನೆಲೆ ಬೆಳಗಾವಿಯ ರೈತ ಮಹಾ ಪಂಚಾಯತ್ ಸಮಾವೇಶ ಅತ್ಯಂತ ಮಹತ್ವದ್ದಾಗಿದ್ದು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಚುಕ್ಕಿ ನಂಜುಂಡಸ್ವಾಮಿ ಜಿಲ್ಲೆಯ ರೈತ ಮುಖಂಡರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್, ರೈತ ಮುಖಂಡರಾದ ಕೆ.ಟಿ.ಗಂಗಾಧರ, ಶಿವರಾಯಪ್ಪ ಜೋಗಿನ್, ಶಶಿಕಾಂತ ಪಡಸಲಗಿ, ಚೂನಪ್ಪ ಪೂಜಾರಿ, ಕಲ್ಯಾಣರಾವ್ ಮುಚಳಂಬಿ, ಜಯಶ್ರೀ ಗುರನ್ನವರ ಸೇರಿದಂತೆ ದಲಿತ, ರೈತ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.







