9,291.33 ಕೋಟಿ ರೂ. ಮೊತ್ತದ ಬಿಬಿಎಂಪಿ ಬಜೆಟ್ ಮಂಡನೆ: ಆಸ್ತಿಗಳಿಗೆ ಎ ಖಾತೆ, ತೆರಿಗೆ ವಿನಾಯಿತಿ
ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಪ್ರೋತ್ಸಾಹ ಧನ

ಬೆಂಗಳೂರು, ಮಾ.27: ಬೆಂಗಳೂರು ನಗರಿಗರಿಗೆ ಹೊಸ ತೆರಿಗೆ ಹಾಕದ, ಹೆಚ್ಚು ಅಂಕ ಪಡೆದ ಬಿಬಿಎಂಪಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 25 ಸಾವಿರ ಪ್ರೋತ್ಸಾಹ ಧನ ಒಳಗೊಂಡ 9,291.33 ಕೋಟಿ ರೂ. ಮೊತ್ತದ 2021-22ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ.
ಶನಿವಾರ ನಗರದ ಮಲ್ಲೇಶ್ವರಂ ಐಪಿಪಿ ತರಬೇತಿ ಕೇಂದ್ರದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‍ಗುಪ್ತ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ಆಯುಕ್ತೆ ತುಳಸಿ ಮದ್ದಿನೇನಿ ಬಜೆಟ್ ಮಂಡಿಸಿ, ಕೋವಿಡ್-19 ಸಂಕಷ್ಟದ ಸಂದರ್ಭದಲ್ಲೂ ಬಿಬಿಎಂಪಿ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ವರ್ಗಗಳ ಹಿತ ಕಾಪಾಡುವಂತಹ ಜನಸ್ನೇಹಿ ಬಜೆಟ್ ಇದಾಗಿದೆ. ಜನತೆಗೆ ಯಾವುದೇ ತೆರಿಗೆ ಹೆಚ್ಚಳವಾಗಲಿ, ಹೊಸ ತೆರಿಗೆ ಪ್ರಸ್ತಾಪವೂ ಮಾಡದೆ ಸಮತೋಲನ ಬಜೆಟ್ ಮಂಡಿಸಲಾಗಿದೆ ಎಂದರು.
ಪಾಲಿಕೆಯ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ರೂ.ಹಾಗೂ ಶೇ.60ರಷ್ಟು ವಿದ್ಯಾರ್ಥಿಗಳು ಶೇ.85ರಷ್ಟು ಅಂಕ ಪಡೆದ ಶಾಲೆಗಳ ಶಿಕ್ಷಕ ವೃಂದಕ್ಕೆ 2 ಲಕ್ಷ ರೂ.ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಬಿಎಂಪಿ ಕಾಯ್ದೆ-2020ನ್ನು ಸರಕಾರ ಜಾರಿಗೆ ತಂದಿದ್ದು, ಪಾಲಿಕೆಯ ವಲಯಗಳು, ವಿಧಾನಸಭಾ ಕ್ಷೇತ್ರಗಳು ಮತ್ತು ವಾರ್ಡ್ ಗಳಿಗೆ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರಿಗಳ ವಿಕೇಂದ್ರಿಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 2 ಸಾವಿರ ಕೋಟಿ ರೂ.ಅನುದಾನವನ್ನು ವಲಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ತಿ ತೆರಿಗೆ ಸಂಗ್ರಹದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಾರ್ಡ್ ಗಳಲ್ಲಿ ಸಂಗ್ರಹಿಸಿದ ಆಸ್ತಿ ತೆರಿಗೆಯ ಶೇ.1ರಷ್ಟು ಅನುದಾನವನ್ನು ವಾರ್ಡ್ ಸಮಿತಿಗೆ ಅಗತ್ಯ ಕೆಲಸಗಳನ್ನು ನಿರ್ವಹಿಸುವ ಸಲುವಾಗಿ ನೀಡಲು ಉದ್ದೇಶಿಸಲಾಗಿದೆ. ಹಾಗೆಯೇ ಈ ಆರ್ಥಿಕ ಸಾಲಿನಲ್ಲಿ ಇ-ಆಸ್ತಿ ತಂತ್ರಾಂಶವನ್ನು ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳಿಗೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎ ಮತ್ತು ಬಿ ಖಾತೆಗಳ ಗೊಂದಲಗಳಿದ್ದು, ಸರಕಾರದ ಕಂದಾಯ ಇಲಾಖೆಯ ಸಹಕಾರದೊಂದಿಗೆ ಬಿ ವಹಿಯಲ್ಲಿ ಆಸ್ತಿಗಳ ದಾಖಲಿಸುವ ಪದ್ಧತಿಯನ್ನು ರದ್ದುಗೊಳಿಸಿ, ಎ ಖಾತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಹೊಸ ವಲಯಗಳ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪಾಲಿಕೆಯ ಆರ್ಥಿಕ ನಿರ್ವಹಣೆ ಬಗ್ಗೆ ಇಕ್ರಾ ಸಂಸ್ಥೆಯು ಎ+ ಕ್ರೆಡಿಟ್ ರೇಟಿಂಗ್ ನೀಡಿದ್ದು, ಈ ರೇಟಿಂಗ್‍ನ್ನು ಉಳಿಸಿಕೊಂಡು, ಆರ್ಥಿಕ ಶಿಸ್ತು ಮತ್ತು ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆ ತರುವುದರೊಂದಿಗೆ ಭವಿಷ್ಯದಲ್ಲಿ ಮುನಿಸಿಪಲ್ ಬಾಂಡ್‍ಗಳ ಮೂಲಕ ಪಾಲಿಕೆಯ ಹಣಕಾಸು ಮಾರುಕಟ್ಟೆಯಿಂದ ನಿಧಿಯನ್ನು ಸಂಗ್ರಹಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಪಾಲಿಕೆ ನಿಧಿಯಿಂದ ಕೈಗೊಳ್ಳಲಾದ ಅಂದಾಜು 10 ಸಾವಿರ ಕೋಟಿ ರೂ.ಕಾಮಗಾರಿ ವಿವರಗಳನ್ನು ನಾವು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದ್ದೇವೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಕೆಲಸವನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲೇ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಅಂತರ್‍ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಒಂದು ಪ್ರತ್ಯೇಕ ಕಂಪೆನಿಯನ್ನು ಸ್ಥಾಪಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಆ ಕಂಪೆನಿಯು ಇನ್ನು ಪ್ರಾರಂಭದ ಹಂತದಲ್ಲಿದ್ದು, ಪಾಲಿಕೆಯಿಂದ ಹಣಕಾಸಿನ ನೆರವು ಅಗತ್ಯವಿರುವುದರಿಂದ ಈ ಸಾಲಿನಲ್ಲಿ 522 ಕೋಟಿ ರೂ.ಬಂಡವಾಳ ಕಾಮಗಾರಿಗಳನ್ನು ಒಳಗೊಂಡಂತೆ ಒಟ್ಟಾರೆ 1622.33 ಕೋಟಿ ರೂ.ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು
-ಘನತ್ಯಾಜ್ಯ ನಿರ್ವಹಣೆಗೆ 1622.33 ಕೋಟಿ ರೂ.
-ಸಾರ್ವಜನಿಕ ಶೌಚಾಲಯಗಳನ್ನು ಓಡಿಎಫ್++ ಮಾನದಂಡಗಳೊಂದಿಗೆ ನಿರ್ವಹಿಸಿ ಮತ್ತು ಹೊಸದಾಗಿ 67 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
-ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಆಚರಣೆಗೆ ಬಿಬಿಎಂಪಿಯ ಪ್ರತಿ ಪೌರಕಾರ್ಮಿಕರಿಗೆ 5 ಸಾವಿರ ರೂ.ವನ್ನು ನೇರ ಪಾವತಿ ಮಾಡಲಾಗುವುದು.
-ಸಾಮಾಜಿಕ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಯೋಜನೆಗಳ ಅರ್ಜಿಗಳನ್ನು ಬೆಂಗಳೂರು ಒನ್ ಕೇಂದ್ರ ಮತ್ತು ಪಾಲಿಕೆಯ ವೆಬ್‍ಸೈಟ್‍ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
-ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ 337 ಕೋಟಿ ರೂ.ಅಗತ್ಯ ನೆರವನ್ನು ನೀಡಿದೆ.
-ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸುಮಾರು 5 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.
-ಪಾಲಿಕೆಯು ಸುಮಾರು 1200ಕ್ಕೂ ಹೆಚ್ಚು ಉದ್ಯಾನವನಗಳನ್ನು ಹೊಂದಿದ್ದು, ಇವುಗಳ ನಿರ್ವಹಣೆಯು ವಾರ್ಡ್ ಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುವುದು.
-ಮನೆಯಲ್ಲೇ ತಯಾರಿಸಿದ ಕಾಂಪೋಸ್ಟ್ ವಲಯ ಮಟ್ಟದಲ್ಲಿ ಸ್ಪರ್ಧೆಯನ್ನು ಏರ್ಪಡಿಸಿ ಪ್ರತಿ ವಲಯಕ್ಕೆ ಒಂದು ಲಕ್ಷ ಬಹುಮಾನ ನೀಡುವ ಯೋಜನೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
-ನಾಗರಿಕರಿಗಾಗಿ ಪಾದಚಾರಿ ಮಾರ್ಗ ಅಭಿಯಾನದ ಅಂಗವಾಗಿ ಪ್ರತಿ ವಾರ್ಡ್ ಸಮಿತಿಗೆ 20 ಲಕ್ಷ ರೂ.ವನ್ನು ಪಾದಚಾರಿ ಮಾರ್ಗ ದುರಸ್ತಿಗಾಗಿ ನೀಡಲಾಗುವುದು.
-ಕೆರೆಯ ಪ್ರದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಕೆರೆಯ ಸುತ್ತ ಫೆನ್ಸಿಂಗ್ ಅಳವಡಿಸಲು 10 ಕೋಟಿ ರೂ. ಅನುದಾನ ಒದಗಿಸಲಾಗಿದೆ.
-2007ರಲ್ಲಿ ಪಾಲಿಕೆಗೆ ಸೇರಿದ 110 ಹಳ್ಳಿಗಳಲ್ಲಿ ಬೆಂಗಳೂರು ಜಲಮಂಡಳಿಯಿಂದ ನೀರಿನ ಕೊಳವೆಗಳು ಮತ್ತು ಒಳಚರಂಡಿಗೆ ಅಗೆದಿರುವ ರಸ್ತೆಗಳ ದುರಸ್ತಿಗಾಗಿ ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.
-ನಗರದ ಸಮಗ್ರ ಸಂಚಾರ ವ್ಯವಸ್ಥೆ ನಿರ್ವಹಣೆಯು ಬೆಂಗಳೂರು ನಗರದ ಪ್ರಮುಖ ಆದ್ಯತೆಯಾಗಿದ್ದು, 12 ಹೈ-ಡೆನ್ಸಿಟಿ ಕಾರಿಡಾರ್ ಉನ್ನತೀಕರಣ, ಮೆಟ್ರೋ ಮಾರ್ಗಗಳ ವಿಸ್ತರಣೆ, ಸಬ್-ಅರ್ಬನ್ ರೈಲನ್ನು ಕಾರ್ಯಗತಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ.
-ನಗರದ ಇತಿಹಾಸ, ಸಂಸ್ಕೃತಿ, ಕಲೆಯನ್ನು ಪ್ರತಿಬಿಂಬಿಸುವ ಹಾಗೂ ಯುವ ಜನತೆಗೆ ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಎನ್‍ಜಿಇಎಫ್ ಮತ್ತು ಮೈಸೂರು ಲ್ಯಾಂಪ್ ಪ್ರದೇಶದಲ್ಲಿ ಎಕ್ಸ್‍ಪೀರಿಯನ್ಸ್ ಬೆಂಗಳೂರು ಕೇಂದ್ರವನ್ನು ಸ್ಥಾಪಿಸಲಾಗುವುದು.
-ಬೆಂಗಳೂರು ನಾಗರಿಕರ ಖಾತಾ ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣ ಪತ್ರ, ಉದ್ಯಮ ಪರವಾನಿಗೆ, ಕಟ್ಟಡ ನಕ್ಷೆ ಪರವಾನಿಗೆ ಇತ್ಯಾದಿ ಸೇವೆಗಳು ಆನ್‍ಲೈನ್‍ನಲ್ಲಿ ಸರಳೀಕೃತಗೊಳಿಸಿ, ಏಕೀಕೃತ ಡಿಜಿಟಲ್ ಪೋರ್ಟಲ್ ವ್ಯವಸ್ತೆ ಕಲ್ಪಿಸಲಾಗುತ್ತದೆ.
2021-22ನೇ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ ಸಿಬ್ಬಂದಿ ವೆಚ್ಚ 1,267.75 ಕೋಟಿ ರೂ., ಆಡಳಿತ ವೆಚ್ಚ 150.37 ಕೋಟಿ ರೂ., ಬ್ಯಾಂಕ್ ಸಾಲ ಮತ್ತು ಬಡ್ಡಿ ಪಾವತಿ 296.87 ಕೋಟಿ ರೂ., ಕಾರ್ಯಕ್ರಮಗಳ ವೆಚ್ಚ 424.25ಕೋಟಿ ರೂ., ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 2115.63 ಕೋಟಿ ರೂ., ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ 4587.68 ಕೋಟಿ ರೂ. ಹಾಗೂ ಠೇವಣಿ ಮತ್ತು ಕರಗಳ ಮರುಪಾವತಿ 344.25 ಕೋಟಿ ರೂ. ಸೇರಿ ಒಟ್ಟು 9,291.33 ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎ ಮತ್ತು ಬಿ ಖಾತೆಯ ಗೊಂದಲಗಳನ್ನು ತೊಡೆದು ಹಾಕಿ ಬಿ ಖಾತೆಯ ಆಸ್ತಿ ದಾಖಲೆ ಪದ್ಧತಿ ರದ್ದುಗೊಳಿಸಿ ಎ ಖಾತೆ ಮಾಡಲು ತೆಗೆದುಕೊಂಡಿರುವ ಬಿಬಿಎಂಪಿ ಕ್ರಮವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ವಾಗತಿಸುತ್ತದೆ.
-ಪೆರಿಕಲ್ ಎಂ.ಸುಂದರ್, ಅಧ್ಯಕ್ಷ, ಎಫ್‍ಕೆಸಿಸಿ
2021-22ನೇ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ ಕೋವಿಡ್ ಸಂಕಷ್ಟದ ನಡುವೆಯು ಎಲ್ಲ ವರ್ಗಗಳಿಗೆ, ವಲಯಗಳಿಗೆ ಹಾಗೂ ವಾರ್ಡ್‍ಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಂಡಿದೆ. ಹಾಗೂ ಯಾವುದೇ ತೆರಿಗೆ ಹೆಚ್ಚಳ ಮಾಡದೆ ಜನಪರ ಬಜೆಟ್‍ನ್ನು ಮಂಡಿಸಲಾಗಿದೆ.
-ಗೌತಮ್ ಕುಮಾರ್, ಮೇಯರ್, ಬಿಬಿಎಂಪಿ
2021-22ನೇ ಬಿಬಿಎಂಪಿ ಬಜೆಟ್‍ನಲ್ಲಿ ಹೊಸ ಕಾಮಗಾರಿಗಳ ಯಾವುದೇ ಪ್ರಸ್ತಾವನೆ ಇಲ್ಲ. ತನ್ನ ಆದಾಯ ವೃದ್ಧಿಗೆ ಯಾವುದೇ ದಿಟ್ಟ ಕ್ರಮಗಳನ್ನು ಘೋಷಿಸದೆ ಕೇವಲ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅನುದಾನಗಳಿಗಾಗಿ ಭಿಕ್ಷೆ ಬೇಡುವಂತಹ ಬಜೆಟ್ ಇದಾಗಿದೆ.
-ಮೋಹನ್ ದಾಸರಿ, ಅಧ್ಯಕ್ಷ, ಆಮ್‍ಆದ್ಮಿ







