ಬಿಜೆಪಿ ಸೇರಿದ್ದ ಮಾಜಿ ಟಿಎಂಸಿ ನಾಯಕನಿಂದ ಮಮತಾ ಸಹಾಯ ಕೋರಿದ್ದಾರೆನ್ನಲಾದ ಆಡಿಯೋ ಕ್ಲಿಪ್ ವೈರಲ್
ಹೊಸ ವಿವಾದ ಸೃಷ್ಟಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಾವು ಸ್ಪರ್ಧಿಸುತ್ತಿರುವ ನಂದಿಗ್ರಾಮದ ಬಿಜೆಪಿ ನಾಯಕರೊಬ್ಬರಿಗೆ ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿ ತನ್ನ ಗೆಲುವಿಗೆ ಸಹಾಯ ಮಾಡಲು ಕೋರಿದ್ದಾರೆನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ ಒಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದ ದಿನವಾದ ಶನಿವಾರ ಭಾರೀ ವಿವಾದ ಸೃಷ್ಟಿಸಿದೆ. ನಂದಿಗ್ರಾಮ ಕ್ಷೇತ್ರದಿಂದ ಮಮತಾ ಅವರು ತಮ್ಮದೇ ಪಕ್ಷದ ಮಾಜಿ ನಾಯಕ, ಬಿಜೆಪಿ ಸೇರಿರುವ ಸುವೇಂದು ಅಧಿಕಾರಿಯನ್ನು ಎದುರಿಸುತ್ತಿದ್ದಾರೆ.
ವಿವಾದಿತ ಆಡಿಯೋ ಕ್ಲಿಪ್ ಅನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರ ನೇತೃತ್ವದ ನಿಯೋಗ ಸಲ್ಲಿಸಿದೆಯಲ್ಲದೆ ಮಮತಾ ಅವರು ತಮ್ಮ ಅಧಿಕೃತ ಹುದ್ದೆಯನ್ನು ಬಳಸಿಕೊಂಡು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಆಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸಿರುವ ತೃಣಮೂಲ ಕಾಂಗ್ರೆಸ್ ಅದೇ ಸಮಯ ಮಮತಾ ಅವರು ಮನವೊಲಿಸುವ ಯತ್ನ ನಡೆಸಿದ್ದಾರೆನ್ನಲಾದ ಪ್ರಳಯ್ ಪಾಲ್ ಬಿಜೆಪಿ ಸೇರಿದ ಮಾಜಿ ತೃಣಮೂಲ ಕಾಂಗ್ರೆಸ್ ನಾಯಕರಾಗಿರುವುದರಿಂದ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಲು ಮಮತಾ ಯತ್ನಿಸುವುದರಲ್ಲಿ ತಪ್ಪೇನಿಲ್ಲ ಎಂದೂ ಹೇಳಿದೆ.
ಮಮತಾ ಬ್ಯಾನರ್ಜಿ ತಮಗೆ ಕರೆ ಮಾಡಿ ನಂದಿಗ್ರಾಮದಲ್ಲಿ ಗೆಲ್ಲಲು ಸಹಾಯ ಮಾಡುವಂತೆ ಕೋರಿದ್ದಾರೆಂದು ಪಾಲ್ ಅವರು ಹೇಳಿಕೊಂಡಿದ್ದಾರೆ.
``ದೀದಿ ನೀವು ನನಗೆ ಕರೆ ಮಾಡಿದ್ದೀರಿ, ನನಗೆ ಖುಷಿಯಾಯಿತು. ಆದರೆ ನಾನು ಕಷ್ಟ ಸುಖದಲ್ಲಿ ಜತೆಯಾಗಿ ನಿಂತ ಅಧಿಕಾರಿ ಅವರಿಗೆ ವಿಶ್ವಾಸದ್ರೋಹವೆಸಗಲು ಸಾಧ್ಯವಿಲ್ಲ,'' ಎಂದು ಆಡಿಯೋದಲ್ಲಿ ಪಾಲ್ ಹೇಳುತ್ತಿರುವುದು ಕೇಳಿಸುತ್ತದೆ.
ಮಮತಾ ಅವರು ತಮಗೆ ಮಾಡಿದ ಮನವಿಯನ್ನು ತಾವು ನಿರಾಕರಿಸಿದ್ದಾಗಿ ನಂತರ ಪಾಲ್ ಸುದ್ದಿಗಾರರಿಗೆ ಹೇಳಿಕೊಂಡಿದ್ದಾರೆ.







