ಕೇರಳ ವಿಧಾನಸಭಾ ಚುನಾವಣೆ: 26 ವರ್ಷದ ಯುವಕನಿಂದ ಸ್ಪರ್ಧೆ

ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಂ. ಅಭಿಜಿತ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಓರ್ವ ಕಿರಿಯ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ಸಿನ ವಿದ್ಯಾರ್ಥಿ ವಿಭಾಗವಾದ ಕೇರಳ ವಿದ್ಯಾರ್ಥಿ ಸಂಘದ(ಕೆಎಸ್ ಯು) ರಾಜ್ಯಾಧ್ಯಕ್ಷರಾಗಿರುವ 26 ಹರೆಯದ ಅಭಿಜಿತ್ ಕೋಝಿಕೋಡ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಸಿಪಿಎಂನ ಟಿ. ರವೀಂದ್ರನ್ ಹಾಗೂ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಅವರಿಂದ ಸ್ಪರ್ಧೆ ಎದುರಿಸಲಿದ್ದಾರೆ. 2006ರಿಂದ ಈ ಕ್ಷೇತ್ರವನ್ನು ಸಿಪಿಎಂನ ಪ್ರದೀಪ್ ಕುಮಾರ್ ಗೆಲ್ಲುತ್ತಾ ಬಂದಿದ್ದಾರೆ.
2017 ರಲ್ಲಿ ಕೆಎಸ್‌ಯು ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಅಭಿಜಿತ್ 29 ಕ್ರಿಮಿನಲ್ ಕೇಸ್ ಗಳನ್ನು ಎದುರಿಸುತ್ತಿದ್ದು, ಎಲ್ಲ ಪ್ರಕರಣಗಳು ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ.
''ಪಕ್ಷ ಹಾಗೂ ಯುಡಿಎಫ್ ನನ್ನ ಮೇಲೆ ನಂಬಿಕೆಯನ್ನು ಇಟ್ಟಿದೆ. ಕಾಂಗ್ರೆಸ್ ಮತ್ತು ಯುಡಿಎಫ್ ಗೋಸ್ಕರ ಕ್ಷೇತ್ರವನ್ನು ಗೆಲ್ಲುವುದು ನನ್ನ ಕೆಲಸ. ಕಳೆದ ಐದು ವರ್ಷಗಳಲ್ಲಿ, ನಾವು ಕೆಎಸ್‌ಯು ಕಾರ್ಯಕರ್ತರಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಸಮಸ್ಯೆಯ ಪರ ನಿಂತಿದ್ದೇವೆ. ಈ ಸರಕಾರದ ನೀತಿಗಳು, ಅಕ್ರಮ ನೇಮಕಾತಿಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಕ್ರಮವಾಗಿ ಅಂಕಗಳನ್ನು ನೀಡುವುದರ ವಿರುದ್ಧ ನಾವು ಹಲವಾರು ಆಂದೋಲನಗಳನ್ನು ನಡೆಸಿದ್ದೇವೆ’’ ಅಭಿಜಿತ್ ಹೇಳಿದ್ದಾರೆ.







