ಜನಾಂಗೀಯ ನಿಂದನೆ, ಪೀಡನೆಗೆ ಬೇಸತ್ತು ಸಾಮಾಜಿಕ ಮಾಧ್ಯಮಗಳಿಂದ ನಿರ್ಗಮಿಸಿದ ಮಾಜಿ ಫುಟ್ಬಾಲ್ ಆಟಗಾರ ಥಿಯರಿ ಹೆನ್ರಿ

ಪ್ಯಾರಿಸ್, ಮಾ. 27: ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ನಿಂದನೆ ಮತ್ತು ಕಿರುಕುಳವನ್ನು ನಿಭಾಯಿಸಲು ಕಂಪೆನಿಗಳು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವವರೆಗೆ ಎಲ್ಲ ಸಾಮಾಜಿಕ ಮಾಧ್ಯಮಗಳಿಂದ ನಾನು ಹೊರಹೋಗುತ್ತಿದ್ದೇನೆ ಎಂದು ಫ್ರಾನ್ಸ್ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ಥಿಯರಿ ಹೆನ್ರಿ ಹೇಳಿದ್ದಾರೆ.
ಇದರೊಂದಿಗೆ ನಿಂದನೆಗೆ ಬೇಸತ್ತು ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸೀಮಿತಗೊಳಿಸಿರುವ ತಾರೆಯರ ಪಟ್ಟಿಗೆ ಹೆನ್ರಿ ಸೇರಿಕೊಂಡಿದ್ದಾರೆ.
ಶನಿವಾರ ನಾನು ಎಲ್ಲ ಸಾಮಾಜಿಕ ಮಾಧ್ಯಮಗಳಿಂದ ಹೊರಹೋಗುತ್ತಿದ್ದೇನೆ ಎಂಬುದಾಗಿ ಆರ್ಸೆನಲ್ ಫುಟ್ಬಾಲ್ ಕ್ಲಬ್‌ನ ಮಾಜಿ ಆಟಗಾರನೂ ಆಗಿರುವ ಥಿಯರಿ ಹೆನ್ರಿ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಹಾಕಿದ ಹೇಳಿಕೆಗಳಲ್ಲಿ ತಿಳಿಸಿದ್ದಾರೆ. ಈ ಮೂರೂ ಮಾಧ್ಯಮಗಳಲ್ಲಿ ಅವರು ಒಟ್ಟು 1.48 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ.
‘‘ಉಪೇಕ್ಷಿಸಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಜನಾಂಗೀಯ ನಿಂದನೆ ಮತ್ತು ಪೀಡನೆಯನ್ನು ನಾನು ಎದುರಿಸುತ್ತಿದ್ದೇನೆ. ಅದರಿಂದ ಹುಟ್ಟಿಕೊಳ್ಳುವ ಮಾನಸಿಕ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ’’ ಎಂದು ಥಿಯರಿ ಹೆನ್ರಿ ಹೇಳಿದ್ದಾರೆ.
ಈ ಪಿಡುಗುಗಳನ್ನು ನಿಭಾಯಿಸಲು ಹೆಚ್ಚಿನ ಆನ್‌ಲೈನ್ ಉತ್ತರದಾಯಿತ್ವದ ಅಗತ್ಯವಿದೆ ಎಂದು ಆಫ್ರಿಕ ಮೂಲದ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.
ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಫ್ರಾನ್ಸ್ ಪರವಾಗಿ ಗರಿಷ್ಠ ಗೋಲುಗಳನ್ನು ಗಳಿಸಿರುವ ಹೆಗ್ಗಳಿಕೆಯನ್ನು ಹೊಂದಿರುವ ಥಿಯರಿ ಹೆನ್ರಿ, ಫುಟ್ಬಾಲ್‌ನಲ್ಲಿರುವ ಜನಾಂಗೀಯ ತಾರತಮ್ಯದ ಬಗ್ಗೆ ನಿರಂತರವಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ.
‘ಎಲ್ಲವನ್ನು ಮಾಡಿಯೂ ಅನಾಮಧೇಯನಾಗಿ ಉಳಿಯಬಹುದಾಗಿದೆ!’
‘‘ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆಗಳನ್ನು ತೆರೆಯುವುದು ಅತ್ಯಂತ ಸುಲಭವಾಗಿದೆ. ಯಾವುದೇ ಪರಿಣಾಮಗಳ ಹೆದರಿಕೆಯಿಲ್ಲದೆ ಜನರನ್ನು ಪೀಡಿಸಲು ಮತ್ತು ಅವರಿಗೆ ಕಿರುಕುಳ ನೀಡಲು ಈ ಖಾತೆಗಳನ್ನು ಬಳಸಬಹುದಾಗಿದೆ ಹಾಗೂ ಕೊನೆಯವರೆಗೂ ಅನಾಮಧೇಯನಾಗಿಯೇ ಉಳಿಯಬಹುದಾಗಿದೆ’’ ಎಂದು ಥಿಯರಿ ಹೆನ್ರಿ ಹೇಳಿದ್ದಾರೆ.







