ರಾಸಾಯನಿಕ ಟ್ಯಾಂಕ್ ಸ್ವಚ್ಛತೆ ವೇಳೆ ಮೂವರು ಕಾರ್ಮಿಕರು ಮೃತ್ಯು

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ ನಾಥ್ ಪಟ್ಟಣದಲ್ಲಿ ಈಗ ಕಾರ್ಯನಿರ್ವಹಿಸದ ರಾಸಾಯನಿಕ ಕಾರ್ಖಾನೆಯಲ್ಲಿ ತ್ಯಾಜ್ಯ ತೈಲವನ್ನು ಸಂಗ್ರಹಿಸಲು ಬಳಸಲಾಗುತ್ತಿದ್ದ ಭೂಮಿಯ ಅಡಿಭಾಗದಲ್ಲಿದ್ದ ಟ್ಯಾಂಕ್ ಅನ್ನು ಸ್ವಚ್ಛ ಗೊಳಿಸುವಾಗ ಮೂವರು ಕಾರ್ಮಿಕರು ಶನಿವಾರ ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಸ್ವಲ್ಪ ತ್ಯಾಜ್ಯವನ್ನು ತೆಗೆದ ನಂತರ ತಮಗೆ ಉಸಿರುಗಟ್ಟುತ್ತಿರುವುದಾಗಿ ದೂರು ನೀಡಿದ್ದಾರೆ. ಇಂದು ಬೆಳಿಗ್ಗೆ ಟ್ಯಾಂಕ್ ಒಳಗೆ ಕುಸಿದು ಬೀಳುವ ಮೊದಲು ಕಾರ್ಮಿಕರು ವಾಕರಿಕೆ ಬರುತ್ತಿರುವುದಾಗಿಯೂ ಹೇಳಿದ್ದರು ಎಂದು ಅಂಬರ್ ನಾಥ್ ಮುನ್ಸಿಪಲ್ ಕೌನ್ಸಿಲ್ಸ್ ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಯಶ್ವಂತ್ ನಲವಾಡೆ ಹೇಳಿದ್ದಾರೆ.
ಮೃತಪಟ್ಟವರನ್ನು ಮುಂಬೈನ ಉಪನಗರ ಗೋವಂಡಿ ಮೂಲದವರಾದ ಬಿದ್ರೇಶ್ ಸಹಾನಿ (35), ದಿನೇಶ್ ಸಹಾನಿ (35) ಹಾಗೂ ಇರ್ಷಾದ್ (30) ಎಂದು ಗುರುತಿಸಲಾಗಿದೆ.
ಈ ಮೂವರು ಗುರುವಾರದಿಂದ ರಾಸಾಯನಿಕ ಘಟಕದಲ್ಲಿ ಸ್ವಚ್ಛ ಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು, ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಮೇಲ್ವಿಚಾರಣೆಯಿಲ್ಲದೆ ಕೆಲಸ ನಡೆಯುತ್ತಿತ್ತು ಎಂದು ನಲವಾಡೆ ಹೇಳಿದರು.
ಆಕಸ್ಮಿಕ ಸಾವಿನ ಪ್ರಕರಣವನ್ನು ಪೊಲೀಸರು ಅಂಬರ್ ನಾಥ್‌ನಲ್ಲಿ ದಾಖಲಿಸಿದ್ದಾರೆ.





