‘ಅಮೃತವಾಗಲಿ ಸ್ವಾತಂತ್ರ ಕಾರ್ಯಕ್ರಮ’

ಉಡುಪಿ, ಮಾ.27: ಸ್ವಾತಂತ್ರದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ನಾವೆಲ್ಲರೂ ನಮಗೆ ಸ್ವಾತಂತ್ರವನ್ನು ತಂದುಕೊಟ್ಟ ಮಹನೀಯರುಗಳನ್ನು ಹಾಗೂ ಹಳ್ಳಿಯಿಂದ ದಿಲ್ಲಿಯ ತನಕವೂ ಹೋರಾಡಿದ ಸಹಸ್ರಾರು ದೇಶಪ್ರೇಮಿಗಳನ್ನು ಸ್ಮರಿಸಿಕೊಳ್ಳ ಬೇಕು. ನಾವು ಆತ್ಮನಿರ್ಭರ ಭಾರತದ ಧ್ಯೇಯದೊಂದಿಗೆ ಸತ್ಯಪಥದಲ್ಲಿ ಭಯಮುಕ್ತರಾಗಿ ಜನಪರವಾದ ಪ್ರಗತಿಯನ್ನು ಸಾಧಿಸುವ ಸ್ವಾವಲಂಬಿ ಸಂಕಲ್ಪವನ್ನು ಮಾಡೋಣ. ಇದರಿಂದಾಗಿ ಸುಸ್ಥಿರ ಪ್ರಗತಿಯೊಂದಿಗೆ ಸ್ವಾತಂತ್ರವು ಅಮೃತವಾಗಲಿ ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಹೇಳಿದ್ದಾರೆ.
ಸ್ವಾತಂತ್ರದ ಅಮೃತ ಮಹೋತ್ಸವ ಹಾಗೂ ದಾಂಡೀ ಯಾತ್ರೆ ಮತ್ತು ಉಪ್ಪಿನ ಸತ್ಯಾಗ್ರಹದ 91ನೇ ವರ್ಷಾಚರಣೆಯ ಅಂಗವಾಗಿ ಎಂಜಿಎಂ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳು ಹಾಗೂ ಗಾಂಧಿ ಅಧ್ಯಯನ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ್ದ ಅಮೃತವಾಗಲಿ ಸ್ವಾತಂತ್ರ ಕಾರ್ಯಕ್ರಮ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಅವರು ಮಾತನಾಡುತಿದ್ದರು.
1930ರ ಮಾರ್ಚ್ 12ರಿಂದ ಎ.6ರವರೆಗೆ ನಡೆದ ದಾಂಡೀ ಯಾತ್ರೆ, ಉಪ್ಪಿನ ಕಾಯ್ದೆ ಭಂಗ ಹಾಗೂ ಆ ಬಳಿಕ ವ್ಯಾಪಕವಾಗಿ ನಡೆದಿದ್ದ ಉಪ್ಪಿನ ಸತ್ಯಾಗ್ರಹ ಇಡೀ ಜಗತ್ತಿನ ಗಮನವನ್ನು ಸೆಳೆದಿತ್ತು. ದಾಂಡಿ ಯಾತ್ರೆಯ ಮಾರ್ಗದುದ್ದಕ್ಕೂ ಗಾಂಧೀಜಿ ರಚನಾತ್ಮಕ ಸಂದೇಶ ನೀಡಿದ್ದರು. ಆ ಚಾರಿತ್ರಿಕ ಸನ್ನಿವೇಶದ ನೆನಪಿನೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನಿ ಚಾಲನೆ ನೀಡಿರುವುದು ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗಾಂಧಿ ಯುಗ ಮತ್ತು ಸ್ವಾತಂತ್ರದ ಅಮೃತ ಮಹೋತ್ಸವದ ಸಾಕ್ಷ್ಯಚಿತ್ರವನ್ನು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿ ಸಲಾಯಿತು. ಅಮೃತ ವಾಗಲಿ ಸ್ವಾತಂತ್ರ ಧ್ಯೇಯದೊಂದಿಗೆ 2022ರ ಆಗಸ್ಟ್ 15ರ ತನಕ ಚಾರಿತ್ರಿಕ ಮಹತ್ವ ದ ಘಟನೆಗಳ ಬಗ್ಗೆ ಮಾಹಿತಿ ಗಳ ದಾಖಲೀಕರಣ ಹಾಗೂ ಇನ್ನಿತರ ರಚನಾತ್ಮಕ ಚಟುವಟಿಕೆಗಳನ್ನು ಯೋಜಿಸಲಾಗಿದೆ.
ಪದವಿ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕಾ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪದವಿ ಪೂರ್ವ ಅರ್ಥ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮೀನಾಕ್ಷಿ ಜಿ. ಉಪಸ್ಥಿತರಿದ್ದರು.







