ಉತ್ತರ ಪ್ರದೇಶ: ವಿದ್ಯುತ್ ಇಲಾಖೆ ಅಧಿಕಾರಿಗಳು, ಪೊಲೀಸರಿಂದ ಥಳಿತಕ್ಕೊಳಗಾದ ವ್ಯಕ್ತಿ ಸಾವು

ಸಾಂದರ್ಭಿಕ ಚಿತ್ರ
ಬಲಿಯಾ,ಮಾ.27: ಪರಿಶೀಲನೆ ಸಂದರ್ಭ 20,000 ರೂ.ಗಳನ್ನು ನೀಡಲು ನಿರಾಕರಿಸಿದ್ದ ವ್ಯಕ್ತಿಯೋರ್ವನನ್ನು ಥಳಿಸಿ ಆತನ ಸಾವಿಗೆ ಕಾರಣರಾಗಿದ್ದಾರೆ ವಿದ್ಯುತ್ ಇಲಾಖೆಯ ಕಿರಿಯ ಇಂಜಿನಿಯರ್ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಎಂಟು ಜನರ ವಿರುದ್ಧ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಪೊಲೀಸರು ಕೊಲೆಯಲ್ಲದ ಅಪರಾಧಿಕ ನರಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮನಿಯಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರಿಗ್ವಾನ್ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ಈ ಘಟನೆ ನಡೆದಿದೆ. ತಾನು ಗ್ರಾಮದಲ್ಲಿ ಹಿಟ್ಟಿನ ಗಿರಣಿಯೊಂದನ್ನು ನಡೆಸುತ್ತಿದ್ದು ಅದಕ್ಕಾಗಿ ಕಾನೂನುಬದ್ಧವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದೇನೆ. ಗಿರಣಿಯ ಪರಿಶೀಲನೆಗೆ ಬಂದಿದ್ದ ವಿದ್ಯುತ್ ಇಲಾಖೆಯ ತಂಡವು 20,000 ರೂ.ಗಳಿಗಾಗಿ ಬೇಡಿಕೆಯನ್ನಿರಿಸಿತ್ತು. ತಾನು ಹಣವನ್ನು ನೀಡಲು ನಿರಾಕರಿಸಿದಾಗ ತಂಡವು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಮತ್ತು ತನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು. ಈ ಸಂದರ್ಭ ವಾಗ್ವಾದ ನಡೆದಿದ್ದು ತನ್ನ ಪುತ್ರನನ್ನು ಅಧಿಕಾರಿಗಳು ಮತ್ತು ಪೊಲೀಸರು ಥಳಿಸಿದ್ದರು. ಪ್ರಜ್ಞಾಶೂನ್ಯನಾಗಿ ಕುಸಿದುಬಿದ್ದಿದ್ದ ಆತನನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಆತ ಕೊನೆಯುಸಿರೆಳೆದಿದ್ದ ಎಂದು ಮೃತ ರಾಮಪ್ರವೇಶ್(45)ನ ತಂದೆ ಮುದ್ರಿಕಾ ಗೊಂಡ್ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಸಂಜಯ ಯಾದವ ತಿಳಿಸಿದರು.





