ತೈಲ ಬೆಲೆಗಳನ್ನು ನಿಯಂತ್ರಿಸಲು ದಾಸ್ತಾನಿರಿಸಿದ ತೈಲ ಬಳಸುವ ಸೌದಿ ಅರೇಬಿಯಾದ ಸಲಹೆ ತಿರಸ್ಕರಿಸಿದ ಭಾರತ

ಹೊಸದಿಲ್ಲಿ, ಮಾ.27: ಕಚ್ಛಾ ತೈಲ ಬೆಲೆ ಹೆಚ್ಚಳದಿಂದ ಗಗನಕ್ಕೇರಿರುವ ತೈಲ ಬೆಲೆಗಳನ್ನು ನಿಯಂತ್ರಿಸಲು ದಾಸ್ತಾನಿರಿಸಿದ ತೈಲ ಬಳಸುವಂತೆ ಸೌದಿ ಅರೇಬಿಯಾ ನೀಡಿದ ಸಲಹೆ ಸಂವೇದನಾಶೂನ್ಯ ಮತ್ತು ನಿಷ್ಠುರ ಹೇಳಿಕೆಯಾಗಿದೆ ಎಂದು ಕೇಂದ್ರ ಸರಕಾರ ಪ್ರತಿಕ್ರಿಯಿಸಿದೆ.
ಇದು ನಮ್ಮ ಹಳೆಯ ಮಿತ್ರರಿಂದ ಬಂದಿರುವ ಸಂವೇದನಾಶೂನ್ಯ ಉತ್ತರವಾಗಿದೆ ಎಂದು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು ಇಲಾಖೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಭಾರತದ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಇಂತಹ ದೃಷ್ಟಿಕೋನವನ್ನು ನಾನು ವಿನಯಪೂರ್ವಕವಾಗಿ ವಿರೋಧಿಸುತ್ತೇನೆ. ತನ್ನಲ್ಲಿರುವ ತೈಲ ಸಂಗ್ರಹವನ್ನು ಯಾವಾಗ, ಎಷ್ಟು ಬಳಸಬೇಕೆಂಬ ಬಗ್ಗೆ ಭಾರತಕ್ಕೆ ತನ್ನದೇ ಆದ ಕಾರ್ಯತಂತ್ರವಿದೆ.
ದೇಶದ ಹಿತಾಸಕ್ತಿಯ ಬಗ್ಗೆ ನಮಗೆ ತಿಳಿದಿದೆ ಎಂದವರು ಹೇಳಿದರು. ಭಾರತ ಎಂದಿಗೂ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ದೇಶದ ಅಗತ್ಯಗಳಿಗೆ ಅನುಸಾರವಾಗಿ ತೈಲವನ್ನು ಯಾರು ಪೂರೈಸುತ್ತಾರೆಯೋ ಅವರಿಂದ ಖರೀದಿಸಲು ಭಾರತ ಸ್ವತಂತ್ರವಾಗಿದೆ. ನಮ್ಮದು ಮುಕ್ತ ಮಾರುಕಟ್ಟೆ ವ್ಯವಸ್ಥೆಯಾಗಿದೆ. ನಮ್ಮ ತೈಲ ಮಾರುಕಟ್ಟೆ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ದೇಶದ ಯಾವುದೇ ಭಾಗದಿಂದ ತೈಲ ಖರೀದಿಸಲು ಸ್ವತಂತ್ರವಾಗಿವೆ. ಇಲ್ಲಿ ದೇಶದ ಸಾಮಾನ್ಯ ಹಿತಾಸಕ್ತಿಯ ರಕ್ಷಣೆಯೇ ಪ್ರಮುಖವಾಗಿದೆ ಎಂದು ಪ್ರಧಾನ್ ಹೇಳಿದರು.
2020ರ ಎಪ್ರಿಲ್-ಮೇ ಅವಧಿಯಲ್ಲಿ ಭಾರತ 16.71 ಮಿಲಿಯನ್ ಬ್ಯಾರಲ್ ಕಚ್ಛಾತೈಲವನ್ನು ಖರೀದಿಸಿ ಆಂಧ್ರಪ್ರದೇಶದ ವಿಶಾಖಪಟ್ಟಣಂ, ಕರ್ನಾಟಕದ ಮಂಗಳೂರು ಮತ್ತು ಪಾದೂರು ತೈಲ ಸಂಗ್ರಹಾಗಾರಗಳಲ್ಲಿ ಶೇಖರಿಸಿಟ್ಟಿದೆ. ಇತ್ತೀಚೆಗೆ ತೈಲ ದರ ಗಗನಕ್ಕೇರಿದ ಹಿನ್ನೆಲೆಯಲ್ಲಿ , ತೈಲ ಸರಬರಾಜು ನಿರ್ಬಂಧವನ್ನು ಸಡಿಲಗೊಳಿಸಿ ಕಚ್ಛಾ ತೈಲದ ಬೆಲೆ ಇಳಿಸುವಂತೆ ಭಾರತವು ಒಪೆಕ್ (ತೈಲ ರಫ್ತು ದೇಶಗಳ ಒಕ್ಕೂಟ) ದೇಶಗಳಿಗೆ ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೌದಿ ಅರೇಬಿಯಾದ ಇಂಧನ ಸಚಿವರು, ಕಚ್ಛಾತೈಲ ಬೆಲೆ ಕಡಿಮೆಯಾಗಿದ್ದಾಗ ಖರೀದಿಸಿ ತೈಲ ಸಂಗ್ರಹಾಗಾರಗಳಲ್ಲಿ ದಾಸ್ತಾನಿರಿಸಿರುವ ತೈಲವನ್ನು ಬಳಸುವಂತೆ ಭಾರತಕ್ಕೆ ಸಲಹೆ ನೀಡಿದ್ದರು.







