ವಿದೇಶಿ ಹಸುಗಳ ಹಾಲು ಸೇವಿಸಿ ಮಹಿಳೆಯರು ದಪ್ಪಗಾಗಿದ್ದಾರೆ: ಡಿಎಂಕೆ ಅಭ್ಯರ್ಥಿ ಹೇಳಿಕೆಗೆ ತೀವ್ರ ಟೀಕೆ

Photo: thenewsminute.com
ಚೆನ್ನೈ, ಮಾ. 27: ತಮಿಳುನಾಡು ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಸಂದರ್ಭ ಮಹಿಳೆಯರ ವಿರುದ್ಧ ಅಸೂಕ್ಷ್ಮ ಹೇಳಿಕೆ ನೀಡಿದ ಬಳಿಕ ಡಿಎಂಕೆ ಅಭ್ಯರ್ಥಿ ದಿಂಡಿಗಲ್ ಲಿಯೋನಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಅವರ ಈ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಲ್ಲದೆ, ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ‘‘ಮಹಿಳೆಯರು ಈಗ ವಿದೇಶಿ ಹಸುಗಳ ಹಾಲು ಕುಡಿಯುತ್ತಿದ್ದಾರೆ. ಅವರ ತೂಕ ಹೆಚ್ಚಾಗಲು ಇದು ಕಾರಣ’’ ಎಂದು ಲಿಯೋನಿ ಹೇಳುತ್ತಿರುವುದು ಕೇಳಿಬಂದಿದೆ ಹಾಗೂ ಅಸಭ್ಯ ಕೈ ಸನ್ನೆ ಮಾಡುತ್ತಿರುವುದು ಕಂಡು ಬಂದಿದೆ. ಮಹಿಳೆಯರ ಆಕಾರ ಹಾಗೂ ತೂಕದ ಬಗ್ಗೆ ಅಪಹಾಸ್ಯ ಮಾಡುವ ಮೂಲಕ ಲಿಯೋನಿ ಅಸಹ್ಯಕರ ಹೇಳಿಕೆ ನೀಡಿದ್ದಾರೆ.
‘‘ಮಹಿಳೆಯರು ತಮ್ಮ ರೂಪವನ್ನು ಕಳೆದುಕೊಳ್ಳುತ್ತಾರೆ ಹಾಗೂ ಹೆಚ್ಚಾಗಿ ಬ್ಯಾರಲ್ನಂತೆ ಕಾಣುತ್ತಾರೆ’’ ಎಂದು ಡಿಎಂಕೆಯ ಚುನಾವಣಾ ಪ್ರಚಾರದ ಸಂದರ್ಭ ಅವರು ಹೇಳಿದ್ದಾರೆ. ಕೊಟ್ಟಿಗೆಯಲ್ಲಿ ವಿದೇಶಿ ಹಸುಗಳ ಹಾಲು ಕರೆಯಲು ಜನರು ಹಾಲು ಕರೆಯುವ ಯಂತ್ರ ಬಳಸುತ್ತಾರೆ. ಇಂದಿನ ದಿನಗಳಲ್ಲಿ ಮಹಿಳೆಯರು ವಿದೇಶಿ ಗೋವುಗಳ ಹಾಲು ಕುಡಿಯುತ್ತಾರೆ. ಆದುದರಿಂದ ಅವರ ತೂಕ ಹೆಚ್ಚಾಗುತ್ತಿದೆ. ಅಂದಿನ ದಿನಗಳಲ್ಲಿ ಮಹಿಳೆಯರ ಸೊಂಟ 8 ಸಂಖ್ಯೆಯಂತೆ ಇತ್ತು. ಆಕೆ ಸಣ್ಣ ಮಗುವನ್ನು ಎತ್ತುವಾಗ, ಚಿಕ್ಕಮಗು ಸೊಂಟದಲ್ಲಿ ಇರುತ್ತಿತ್ತು. ಆದರೆ, ಈಗ ಅವರು ಬ್ಯಾರಲ್ನಂತೆ ಆಗಿದ್ದಾರೆ. ಯಾಕೆಂದರೆ ಅವರು ತಮ್ಮ ಮಕ್ಕಳನ್ನು ಸೊಂಟದಲ್ಲಿ ಎತ್ತಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.
ಲಿಯೋನಿ ಅವರ ಹೇಳಿಕೆಯನ್ನು ಬಿಜೆಪಿಯ ಕಲೆ ಹಾಗೂ ಸಾಂಸ್ಕೃತಿಕ ಘಟಕದ ಅಧ್ಯಕ್ಷೆ ಗಾಯತ್ರಿ ರಘುರಾಮ್, ಪಶ್ಚಿಮಬಂಗಾಳದ ಬಿಜೆಪಿ ವರಿಷ್ಠ ದಿಲೀಪ್ ಘೋಷ್ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ನಾಯಕಿ ಮಹುವಾ ಮೊಯಿತ್ರಾ ತೀವ್ರವಾಗಿ ಟೀಕಿಸಿದ್ದಾರೆ.







