ತಮಿಳುನಾಡು ವಿಧಾನಸಭಾ ಚುನಾವಣೆ: ಸಿದ್ದರಾಮಯ್ಯ ಪ್ರಚಾರ, ಮೊಳಗಿದ 'ಹೌದು ಹುಲಿಯಾ' ಘೋಷಣೆ

ಬೆಂಗಳೂರು, ಮಾ. 27: ‘ಅಚ್ಛೇ ದಿನ್ ಬರುತ್ತದೆ ಎಂದು ಕಾಯುತ್ತಾ ಕೂರಬೇಡಿ. ಅಚ್ಛೇ ದಿನ್ ಯಾವತ್ತೂ ಬರುವುದಿಲ್ಲ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ ಮತದಾರರಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.
ಶನಿವಾರ ತಮಿಳುನಾಡಿನ ಥಳಿ, ಹೊಸೂರು ಹಾಗೂ ವೇಪನಪಲ್ಲಿ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡಿನ ಜನತೆ ಈವರೆಗೆ ಬಿಜೆಪಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅವರಿಗೆ ನಮೋ ನಮಃ. ಇದೀಗ ಎಐಎಡಿಎಂಕೆ ಹೆಗಲ ಮೇಲೆ ಕುಳಿತು ಬಿಜೆಪಿ ತಮಿಳುನಾಡಿನಲ್ಲಿ ಬೇರೂರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.
ದ್ರಾವಿಡ ಚಳವಳಿ ಕೋಮುವಾದಿಗಳ ವಿರುದ್ಧವಾಗಿತ್ತು. ಆದರೆ ಎಐಎಡಿಎಂಕೆ ಅದೇ ಕೋಮುವಾದಿಗಳ ಜೊತೆ ಕೈ ಜೋಡಿಸಿದೆ. ಬಿಜೆಪಿಗೆ ಯಾವುದೇ ಕಾರ್ಯಕ್ರಮ, ಸಿದ್ಧಾಂತ ಇಲ್ಲ. ದೇವರ ಹೆಸರಲ್ಲಿ ಜನರ ಭಾವನೆ ಕೆರಳಿಸಿ ಅವರು ಮತ ಕೇಳುತ್ತಾರೆ. ನಾನೂ ರಾಮನ ಭಕ್ತನೇ. ನನ್ನ ಹೆಸರಲ್ಲೂ ರಾಮ ಇದ್ದಾನೆ ಎಂದು ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರುಣಾನಿಧಿ ಮತ್ತು ಕಾಮರಾಜರ ಆಡಳಿತವನ್ನು ನೀವು ನೋಡಿದ್ದೀರಿ. ಕರ್ನಾಟಕದಲ್ಲಿ 25 ಪರ್ಸೆಂಟ್ ಸರಕಾರವಿದೆ. ದೇಶ, ರಾಜ್ಯದಲ್ಲಿ ಸಂಬಳ ಕೊಡಲೂ ದುಡ್ಡಿಲ್ಲ. ಎರಡೂವರೆ ಲಕ್ಷ ಕೋಟಿ ರೂ.ತೆರಿಗೆ ಕರ್ನಾಟಕದಿಂದ ಕೇಂದ್ರಕ್ಕೆ ಹೋಗುತ್ತದೆ. ಆದರೆ, ಕೇಂದ್ರ ನಮ್ಮ ರಾಜ್ಯಕ್ಕೆ ಕೊಟ್ಟಿರುವುದು 35 ಸಾವಿರ ಕೋಟಿ ರೂ. ಮಾತ್ರ ಎಂದು ಸಿದ್ದರಾಮಯ್ಯ ಟೀಕಿಸಿದರು.
ದೇಶದ ಜನತೆ ದಿಲ್ಲಿ ಆಡಳಿತ ನೋಡಿದ್ದಾರೆ. ಪ್ರಧಾನಿ ಮೋದಿ ದೇಶ ಹಾಳು ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿ ಅಂಚಿಗೆ ತಲುಪಿದೆ. ಮೋದಿ ಮಹಾನ್ ಸುಳ್ಳುಗಾರರು. ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ದೇಶ ಎಂದೂ ಕಂಡಿರಲಿಲ್ಲ. ಬಿಜೆಪಿಯ ದುರಾಡಳಿತದ ಫಲವಾಗಿ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಧ್ಯಮ ವರ್ಗದವರು ಜೀವನ ನಡೆಸಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯಿಂದ ದೇಶದ ಜನ ತತ್ತರಗೊಂಡಿದ್ದಾರೆ. ಪ್ರಧಾಬಿ ಮೋದಿಯವರು ಹೇಳಿದ ಅಚ್ಛೇ ದಿನ್ ಇನ್ನು ಬರುವುದಿಲ್ಲ. ಜನರಿಗೆ ಸುಳ್ಳು ಹೇಳಿ, ಭರವಸೆಯ ಮಹಾಪೂರ ಹರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿ. ಥಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸಿಪಿಐ ಅಭ್ಯರ್ಥಿಗೆ ಮತ ಕೊಟ್ಟರೆ ಬಿಜೆಪಿಯ ದುರಾಡಳಿತದ ವಿರುದ್ಧ ಮತ ಕೊಟ್ಟಂತೆ. ಸ್ಟಾಲಿನ್ ಮುಖ್ಯಮಂತ್ರಿ ಆಗಬೇಕು ಎಂದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜನತೆ ಆಶೀರ್ವಾದ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಪ್ರಚಾರದ ವೇಳೆ ತಮಿಳುನಾಡಿನ ಸಂಸದ ಚೆಲ್ಲಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಬಿ.ಝಡ್.ಝಮೀರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಹೌದು ಹುಲಿಯಾ..:
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಥಳಿ ಕ್ಷೇತ್ರದ ಡೆಂಕಣಿಕೋಟೆ ಸೇರಿದಂತೆ ವಿವಿಧೆಡೆಗಳಲ್ಲಿ ಅಬ್ಬರ ಪ್ರಚಾರ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಅಲ್ಲಿನ ಜನತೆ ‘ಹೌದು ಹುಲಿಯಾ' ಎಂದು ಘೋಷಣೆ ಕೂಗಿ, ಹೂವಿನ ಹಾರವನ್ನು ಹಾಕುವ ಮೂಲಕ ಸ್ವಾಗತಿಸಿದರು.







