ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರೌಡಿಯ ಹತ್ಯೆ

ಬೆಂಗಳೂರು, ಮಾ.27: ಕೊಲೆ, ಕೊಲೆ ಯತ್ನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸೈಯದ್ ವಸೀಂ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಚಂದ್ರಾಲೇಔಟ್‍ನಲ್ಲಿ ನಡೆದಿದೆ.
ಗಂಗೊಂಡನಹಳ್ಳಿಯ ಮಸೀದಿ ಬಳಿ ಗಂಗೊಂಡನಹಳ್ಳಿಯ ರೌಡಿ ವಸೀಂ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ, ಆತನ ಸ್ನೇಹಿತ ಅಬ್ದುಲ್‍ಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾಗಿರುವ ಗಂಗೊಂಡನಹಳ್ಳಿಯ ಅಬ್ದುಲ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾದ ಆರೋಪಿಗಳನ್ನು ಶೇಖ್‍ಬರ್ಕತ್, ನ್ಯಾಮತ್, ಸೈಫುಲ್ಲಾ, ಜಿಯಾವುಲ್ಲಾ ಹಾಗೂ ಮೊಹ್ಮದ್ ಎಂದು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ವಸೀಂ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟರೆ, ಸ್ನೇಹಿತ ಅಬ್ದುಲ್‍ಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಹತ್ಯೆಯಾದ ರೌಡಿ ವಸೀಂ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಹತ್ತು ಪ್ರಕರಣಗಳು ದಾಖಲಾಗಿವೆ.







