ಮುಂಬೈ: ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ; 6 ಮಂದಿಯ ವಿರುದ್ಧ ಪ್ರಕರಣ ದಾಖಲು
ಮುಂಬೈ, ಮಾ. 27: ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 9 ಮಂದಿ ರೋಗಿಗಳ ಸಾವಿಗೆ ಕಾರಣವಾದ ಭಾಂಡುಪ್ ಮಾಲ್‌ನ ಸನ್‌ರೈಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿ 6 ಮಂದಿಯ ವಿರುದ್ಧ ಅಪರಾಧ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಥಮ ಮಾಹಿತಿ ವರದಿಯಲ್ಲಿ ಗೃಹ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಲಿಮಿಟೆಡ್ (ಎಚ್‌ಡಿಐಎಲ್) ಪ್ರವರ್ತಕ ರಾಕೇಶ್ ವಾಘನಾನ್ ಹಾಗೂ ಮಾಲ್‌ನ ನಿರ್ದೇಶಕರಾಗಿರುವ ಅವರ ಪುತ್ರ ಸಾರಂಗ್ ಅವರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ. ಅಗ್ನಿ ದುರಂತ ಸಂಭವಿಸಿದ ಡ್ರೀಮ್ಸ್ ಮಾಲ್‌ನ ಆಡಳಿತ ಮಂಡಳಿ ಹಾಗೂ ಅಗ್ನಿ ದುರಂತದಲ್ಲಿ ಮೃತಪಟ್ಟ 9 ಮಂದಿ ಕೊರೋನ ರೋಗಿಗಳು ದಾಖಲಾಗಿದ್ದ ಸನ್‌ರೈಸ್ ಆಸ್ಪತ್ರೆಯ ಹೆಸರನ್ನು ಕೂಡ ಭಾಂಡುಪ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಮಾಲ್‌ನ ನಿರ್ದೇಶಕರಾದ ರಾಕೇಶ್ ವಾಧವಾನ್, ನಿಖಿತಾ ಅಮಿತ್ ಸಿಂಗ್ ತ್ರೆಹಾನ್, ಸಾರಂಗ್ ವಾಧವಾನ್, ದೀಪಕ್ ಶಿರ್ಕೆ ಹಾಗೂ ಆಸ್ಪತ್ರೆಯ ನಿರ್ದೇಶಕರಾದ ಅಮಿತ್ ಸಿಂಗ್ ತ್ರೆಹಾನ್ ಹಾಗೂ ಸ್ವೀಟಿ ಜೈನ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ನಿಖಿತಾ ತ್ರೆಹಾನ್ ಆಸ್ಪತ್ರೆಯ ನಿರ್ದೇಶಕರು ಕೂಡ ಹೌದು’’ ಎಂದು ಅವರು ತಿಳಿಸಿದ್ದಾರೆ. ‘‘ಇದುವರೆಗೆ ನಡೆಸಿದ ತನಿಖೆಯ ಸಂದರ್ಭ ಪೊಲೀಸರು ಮಾಲ್‌ನಲ್ಲಿ ಹಲವು ಪ್ರಮಾದವನ್ನು ಪತ್ತೆ ಮಾಡಿದ್ದಾರೆ. ಭದ್ರತೆ ಷರತ್ತುಗಳ ದುರುಪಯೋಗ ಹಾಗೂ ಅಗ್ನಿ ಸುರಕಾ ಉಪಕರಣಗಳನ್ನು ಸೂಕ್ತ ಸಮಯದ ಪರಿಶೀಲಿಸದಿರುವುದು ಕಂಡು ಬಂದಿದೆ’’ ಎಂದು ಅವರು ತಿಳಿಸಿದ್ದಾರೆ. ಈ ಮಾಲ್‌ನಲ್ಲಿ 1,109 ಅಂಗಡಿಗಳು ಇವೆ. ಇವುಗಳಲ್ಲಿ ಸುಮಾರು ಶೇ. 40 ಅಂಗಡಿಗಳು ಮುಚ್ಚಿವೆ. ಜನವರಿಯಲ್ಲಿ ಇಲ್ಲಿನ ಸನ್‌ರೈಸ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







