25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಮಿಕ್ಸೆಡ್ ಸ್ಪರ್ಧೆಯಲ್ಲಿ ವಿಜಯವೀರ್, ತೇಜಸ್ವಿನಿಗೆ ಚಿನ್ನ
ಶೂಟಿಂಗ್ ವಿಶ್ವಕಪ್

ಹೊಸದಿಲ್ಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಶನಿವಾರ ನಡೆದ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ವಿಜಯವೀರ್ ಸಿಧು ಮತ್ತು ತೇಜಸ್ವಿನಿ ಚಿನ್ನ ಗೆದ್ದಿದ್ದಾರೆ.
ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಗುರ್‌ಪ್ರೀತ್ ಸಿಂಗ್ ಮತ್ತು ಅಶೋಕ್ ಪಾಟೀಲ್‌ರನ್ನು 9-1 ಅಂತರದಲ್ಲಿ ಮಣಿಸಿ ವಿಜಯವೀರ್, ತೇಜಸ್ವಿನಿ ಚಿನ್ನ ಪಡೆದರು.
ಅರ್ಹತಾ ಸುತ್ತು 2ರಲ್ಲಿ ಗುರ್‌ಪ್ರೀತ್ ಮತ್ತು ಪಾಟೀಲ್ ಒಟ್ಟು 370 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು. 16 ವರ್ಷದ ತೇಜಸ್ವಿನಿ ಮತ್ತು 18ರ ಹರೆಯದ ಸಿಧು ತಂಡ ಒಟ್ಟು 368 ಅಂಕಗಳನ್ನು ಗಳಿಸಿತ್ತು. ಟೂರ್ನಿಯಲ್ಲಿ ಭಾರತ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಿದೆ. ಒಟ್ಟು 27 ಪದಕಗಳನ್ನು ಪಡೆದಿದೆ. ಈ ಪೈಕಿ 13 ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು.
ಪಂದ್ಯಾವಳಿಯಲ್ಲಿ 53 ದೇಶಗಳ 294 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ಮುಂಬರುವ ಟೋಕಿಯೊ ಒಲಿಂಪಿಕ್ಸ್ ಗೆ ಮೊದಲು ಪಿಸ್ತೂಲ್ ಮತ್ತು ರೈಫಲ್ ಶೂಟರ್‌ಗಳಿಗೆ ಇದು ಕೊನೆಯ ಪ್ರಮುಖ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದೆ.





