ಮ್ಯಾನ್ಮಾರ್ ಸೇನೆಯಿಂದ ಒಂದೇ ದಿನ 100ಕ್ಕೂ ಹೆಚ್ಚು ಮಂದಿಯ ಹತ್ಯೆ

ಫೈಲ್ ಫೋಟೋ
ಯಂಗೂನ್, ಮಾ.28: ಮ್ಯಾನ್ಮಾರ್ನಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಹರಸಾಹಸ ನಡೆಸುತ್ತಿರುವ ಅಲ್ಲಿನ ಸೇನೆ, ಶನಿವಾರ ಒಂದೇ ದಿನ 100ಕ್ಕೂ ಹೆಚ್ಚು ಪ್ರತಿಭಟನಾಕಾರನ್ನು ಸಾಯಿಸಿದೆ. ಕ್ಷಿಪ್ರ ಕ್ರಾಂತಿ ನಡೆದ ಬಳಿಕ ಒಂದು ತಿಂಗಳಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಸೇನೆ ಹತ್ಯೆ ಮಾಡಿರುವುದು ಇದೇ ಮೊದಲು.
ಸಾವಿನ ಸಂಖ್ಯೆ 114ನ್ನು ತಲುಪುವ ಸಾಧ್ಯತೆ ಇದೆ ಎಂದು ಆನ್ಲೈನ್ ಸುದ್ದಿತಾಣ Myanmar Now ವರದಿ ಮಾಡಿದೆ. ಸ್ವತಂತ್ರ ಸಂಶೋಧಕರೊಬ್ಬರು ಲೆಕ್ಕ ಹಾಕಿದಂತೆ ಮೃತರ ಸಂಖ್ಯೆ 107. ಇಪ್ಪತ್ತಕ್ಕೂ ಹೆಚ್ಚು ನಗರ ಹಾಗೂ ಪಟ್ಟಣಗಳಲ್ಲಿ ಪ್ರತಿಭಟನಾಕಾರರನ್ನು ಸೇನೆ ಹತ್ತಿಕ್ಕುತ್ತಿದೆ ಎಂದು ಹೇಳಲಾಗಿದೆ. ಮಾರ್ಚ್ 14ರಂದು 74-90 ಮಂದಿ ಪ್ರತಿಭಟನಾಕಾರರು ಸೈನಿಕರ ಗುಂಡಿಗೆ ಬಲಿಯಾಗಿದ್ದರು.
ಸೇನೆಯ ಈ ಕ್ರಮಕ್ಕೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿದೆ. "ಮ್ಯಾನ್ಮರ್ ಸಶಸ್ತ್ರ ಪಡೆಯ 76ನೇ ದಿನಾಚರಣೆಯನ್ನು ಭಯಾನಕ ಮತ್ತು ಅಗೌರವದ ದಿನ" ಎಂದು ಮ್ಯಾನ್ಮಾರ್ ಕುರಿತ ಯೂರೋಪಿಯನ್ ಒಕ್ಕೂಟದ ನಿಯೋಗ ಟ್ವೀಟ್ ಮಾಡಿದೆ.
"ಮಕ್ಕಳೂ ಸೇರಿದಂತೆ ಶಸ್ತ್ರಾಸ್ತ್ರಗಳಿಲ್ಲದ ನಾಗರಿಕರನ್ನು ಹತ್ಯೆ ಮಾಡಿರುವುದನ್ನು ಸಮರ್ಥಿಸಿಕೊಳ್ಳಲಾಗದು" ಎಂದು ಹೇಳಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಕೂಡ ಘಟನೆಯನ್ನು ಖಂಡಿಸಿದ್ದಾರೆ.







