2009ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ನಾಯಕನನ್ನು ಬಂಧಿಸಿದ ಎನ್ ಐಎ

ಕೋಲ್ಕತಾ,ಮಾ.28: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು 2009ರಲ್ಲಿ ನಡೆದಿದ್ದ ಸಿಪಿಎಂ ಕಾರ್ಯಕರ್ತ ಪ್ರಬೀರ ಮಹತೊ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಛತ್ರಧರ ಮಹತೊ ಅವರನ್ನು ರವಿವಾರ ಬಂಧಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಮಹತೊ ಪಶ್ಚಿಮ ಬಂಗಾಳದ ಲಾಲಘರ್ ಪ್ರದೇಶದಲ್ಲಿ 2008ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಪೊಲೀಸ್ ದೌರ್ಜನ್ಯಗಳ ವಿರುದ್ಧ ಜನತಾ ಸಮಿತಿಯ ಮಾಜಿ ಸಂಚಾಲಕರಾಗಿದ್ದಾರೆ. ಸಮಿತಿಯು ನಂತರ ಹಲವಾರು ಎಡರಂಗ ನಾಯಕರ ಹತ್ಯೆಗಳು ಸೇರಿದಂತೆ ಮಾವೋವಾದಿ ಚಟುವಟಿಕೆಗಳ ರಂಗವಾಗಿತ್ತು.
ರವಿವಾರ ನಸುಕಿನಲ್ಲಿ ಲಾಲಘರ್ನ ನಿವಾಸದಿಂದ ಮಹತೊರನ್ನು ಬಂಧಿಸಿದ ಎನ್ಐಎ ಅವರನ್ನು ಕೋಲ್ಕತಾಕ್ಕೆ ಕರೆತಂದಿದೆ. ಯಾವುದೇ ಪ್ರಕರಣ ಅಥವಾ ಬಂಧನದ ವಾರಂಟ್ ಅಥವಾ ನ್ಯಾಯಾಲಯದ ಯಾವುದೇ ಆದೇಶದ ಬಗ್ಗೆ ಮಾಹಿತಿ ನೀಡದೇ ಮಹತೊರನ್ನು ಬಂಧಿಸಲಾಗಿದೆ ಎಂದು ಅವರ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದರು.
ಮಹತೊ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಹೇರಲಾಗಿದೆ ಎಂದು ಅನಾಮಿಕ ಎನ್ಐಎ ಅಧಿಕಾರಿಯೀರ್ವರು ತಿಳಿಸಿದರು.
ತನಿಖೆಗೆ ನೆರವಾಗಲು ವಾರಕ್ಕೆ ಮೂರು ಸಲಕ ಎನ್ಐಎ ಎದುರು ಹಾಜರಾಗುವಂತೆ ಕಲಕತ್ತಾ ಉಚ್ಚ ನ್ಯಾಯಾಲಯವು ಮಹತೊರಿಗೆ ನಿರ್ದೇಶ ನೀಡಿತ್ತು,ಆದರೆ ಮಹತೊ ಅದನ್ನು ಪಾಲಿಸಿರಲಿಲ್ಲ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ಮಹತೊರನ್ನು ಬಂಧಿಸಲಾಗಿತ್ತು. ಅದೇ ವರ್ಷಭುವನೇಶ್ವರ ರಾಜಧಾನಿ ಎಕ್ಸ್ಪ್ರೆಸ್ ರೈಲನ್ನು ಹೈಜಾಕ್ ಮಾಡಿದ್ದ ಮಾವೋವಾದಿಗಳು ಮಹತೊರ ಬಿಡುಗಡೆಯ ಬೇಡಿಕೆಯನ್ನು ಮುಂದಿರಿಸಿದ್ದರು. ಎನ್ಐಎ ಈ ಪ್ರಕರಣದ ತನಿಖೆಯನ್ನೂ ನಡೆಸುತ್ತಿದೆ.
ಈ ವರ್ಷದ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮಹತೊ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.





