ಪೆಹ್ಲು ಖಾನ್ ಗುಂಪುಹತ್ಯೆ ಪ್ರಕರಣ: ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯ ಶೀಘ್ರ ವಿಚಾರಣೆ ನಿರೀಕ್ಷೆ

ಜೈಪುರ, ಮಾ.28: ಪೆಹ್ಲುಖಾನ್ ಹತ್ಯೆ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಮುಂದಿನ ತಿಂಗಳು ಆರಂಭಗೊಳ್ಳುವ ನಿರೀಕ್ಷೆಯಿದೆ.
ಹರ್ಯಾಣದ ಮೇವಾತ್ ಜಿಲ್ಲೆಯ ನುಹ್ ನಿವಾಸಿಯಾಗಿದ್ದ ಹೈನುಗಾರ ಪೆಹ್ಲು ಖಾನ್(55) ಅವರು 2017,ಎ.1ರಂದು ರಾಜಸ್ಥಾನದ ಜೈಪುರದಿಂದ ಹೈನುಗಾರಿಕೆಗಾಗಿ ಹಸುಗಳನ್ನು ಖರೀದಿಸಿ ಊರಿಗೆ ಮರಳುತ್ತಿದ್ದರು. ಆಲ್ವಾರ್ ಬಳಿ ಹೆದ್ದಾರಿಯಲ್ಲಿ ಅವರ ವಾಹನವನ್ನು ತಡೆದು ನಿಲ್ಲಿಸಿದ ಹಿಂದುತ್ವವಾದಿಗಳ ಗುಂಪು ಖಾನ್ ಮತ್ತು ಇತರ ಆರು ಜನರನ್ನು ಹೊರಗೆಳೆದು ಅಕ್ರಮ ಗೋಸಾಗಾಣಿಕೆಯ ಆರೋಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಖಾನ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆಲ್ವಾರ್ ಜಿಲ್ಲೆಯಲ್ಲಿನ ವಿಚಾರಣಾ ನ್ಯಾಯಾಲಯವು 2019ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿದ ಬಳಿಕ ಖಾನ್ ಅವರನ್ನು ಥಳಿಸಿ ಹತ್ಯೆಗೈದಿದ್ದ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. 2020ರಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಖಾನ್ ಅವರ ಪುತ್ರ ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಮೇಲ್ಮನವಿಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈವರೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಪ್ರಕರಣದ ವಕೀಲ ನಾಸಿರ್ ಅಲಿ ನಕ್ವಿ ಅವರು,ಉಚ್ಚ ನ್ಯಾಯಾಲಯವು ಎ.15ರಂದು ವಿಷಯವನ್ನು ಕೈಗೆತ್ತಿಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಸಾಕ್ಷಿಗಳನ್ನು ಸರಿಯಾಗಿ ಪಾಟೀಸವಾಲಿಗೊಳಪಡಿಸಿರಲಿಲ್ಲ ಮತ್ತು ಹೆಚ್ಚುವರಿ ಸಾಕ್ಷಾಧಾರಗಳನ್ನು ಪರಿಗಣಿಸಿರಲಿಲ್ಲ ಎಂಬ ಕಾರಣಗಳಿಂದ ವಿಚಾರಣಾ ನ್ಯಾಯಾಲಯದ ಬಿಡುಗಡೆ ಆದೇಶವು ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಇಡೀ ಪ್ರಕರಣದ ವಿವರಗಳನ್ನು ಜಾಲಾಡಿರುವ ಸುದ್ದಿ ಜಾಲತಾಣ TheWire ವಿಚಾರಣೆ ಹಂತದಲ್ಲಿ ನ್ಯಾಯಾಲಯವು ಕಡೆಗಣಿಸಿದ್ದ ಪ್ರಮುಖ ಅಂಶಗಳ ಕುರಿತು ವರದಿಯೊಂದನ್ನು ಪ್ರಕಟಿಸಿದೆ.

ಖಾನ್ ತನ್ನ ಮರಣ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ,ಸ್ಥಳೀಯ ಬಲಪಂಥೀಯ ಗುಂಪೊಂದರೊಂದಿಗೆ ಗುರುತಿಸಿಕೊಂಡಿದ್ದ ಆರು ಜನರನ್ನು ಪೊಲೀಸರು ಬಿಡುಗಡೆಗೊಳಿಸುವುದರೊಂದಿಗೆ ವಿವಾದವು ಆರಂಭಗೊಂಡಿತ್ತು. ಘಟನೆಯ ಸಂದರ್ಭ ಆರೋಪಿಗಳಾದ ಓಂ ಯಾದವ, ಹುಕುಮಚಂದ್,ನವೀನ ಶರ್ಮಾ,ಸುಧೀರ ಯಾದವ,ರಾಹುಲ್ ಸೈನಿ ಮತ್ತು ಜಗಮಲ್ ಅವರು ಪೊಲೀಸ್ ಸಿಬ್ಬಂದಿಗಳಾದ ವಿಕ್ರಮ ಸಿಂಗ್ ಮತ್ತು ರಘುಬೀರ್ ಸಿಂಗ್ ಅವರೊಂದಿಗೆ ಸಮೀಪದ ಗೋಶಾಲೆಯಲ್ಲಿದ್ದರು ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದರು. ಆದರೆ ವಿಚಾರಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಯನ್ನು ಸಾಬೀತುಗೊಳಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇಬ್ಬರು ಪೊಲೀಸ್ ಸಿಬ್ಬಂದಿಗಳು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯಲ್ಲಿ ಆರೋಪಿಗಳು ತಮ್ಮಾಂದಿಗೆ ಗೋಶಾಲೆಯಲ್ಲಿದ್ದರು ಎನ್ನುವುದನ್ನು ನಿರ್ದಿಷ್ಟವಾಗಿ ತಿಳಿಸಿರಲಿಲ್ಲ. ಆದಾಗ್ಯೂ ಅವರನ್ನು ಪಾಟೀಸವಾಲಿಗೆ ಒಳಪಡಿಸಿರಲಿಲ್ಲ.
ಆರೋಪಿಗಳಲ್ಲೋರ್ವ ತಾವು ಖಾನ್ ರನ್ನು ಹೇಗೆ ಥಳಿಸಿದ್ದೆವು ಎನ್ನುವುದನ್ನು ಎನ್ಡಿಟಿವಿಗೆ ನೀಡಿದ್ದ ಸಂದರ್ಶನದಲ್ಲಿ ವಿವರಿಸಿದ್ದ. ಆತನ ಈ ನ್ಯಾಯಾಂಗೇತರ ತಪ್ಪೊಪ್ಪಿಗೆ ಹೇಳಿಕೆಯು 2018, ಎ.16ರಂದು ಪ್ರಸಾರಗೊಂಡಿತ್ತು. ಭಾರತೀಯ ಸಾಕ್ಷಾಧಾರ ಕಾಯ್ದೆ, 1872ರನ್ವಯ ನ್ಯಾಯಾಂಗ ದಂಡಾಧಿಕಾರಿಯನ್ನು ಹೊರತುಪಡಿಸಿ ಇತರರ ಮುಂದೆ ನೀಡಲಾಗುವ ತಪ್ಪೊಪ್ಪಿಗೆ ಹೇಳಿಕೆಯು ವ್ಯಕ್ತಿಯ ಅಪರಾಧಿತ್ವವನ್ನು ಸಾಬೀತುಗೊಳಿಸಲು ಬಲವಾದ ಪುರಾವೆಯಾಗುವುದಿಲ್ಲ,ಆದರೂ ಅದು ಪೊಲೀಸ್ ಕಸ್ಟಡಿಯಲ್ಲಿನ ತಪ್ಪೊಪ್ಪಿಗೆ ಹೇಳಿಕೆಗಿಂತ ಉತ್ತಮವಾಗುತ್ತದೆ. ಆದರೆ ಆರೋಪಿಯು ಟಿವಿ ಪ್ರಸಾರದಲ್ಲಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದರೂ ವಿಚಾರಣಾ ನ್ಯಾಯಾಲಯವು ಅದನ್ನು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಖಾನ್ ಮತ್ತು ಅವರ ಪುತ್ರನನ್ನು ಅಮಾನುಷವಾಗಿ ಥಳಿಸಿದ್ದನ್ನು ಆರೋಪಿಗಳ ಗುಂಪು ಮೊಬೈಲ್ನಲ್ಲಿ ವೀಡಿಯೊ ಚಿತ್ರೀಕರಿಸಿಕೊಂಡಿತ್ತು, ಅದು ಆರೋಪಿಗಳ ಅಪರಾಧಿತ್ವವನ್ನು ಸಾಬೀತುಗೊಳಿಸಲು ನಂಬಲರ್ಹ ಪುರಾವೆಯಾಗಿತ್ತು. ಆದರೆ ತಾಂತ್ರಿಕ ಕಾರಣಗಳ ನೆಪವನ್ನೊಡ್ಡಿ ಈ ಪುರಾವೆಯನ್ನು ದಾಖಲಿಸಿಕೊಳ್ಳಲು ನ್ಯಾಯಾಲಯವು ನಿರಾಕರಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳ ಪೈಕಿ ಓರ್ವನಾಗಿದ್ದ ರವೀಂದ್ರ ಯಾದವ್ ಎಂಬಾತ ಪ್ರತಿಕೂಲ ಸಾಕ್ಷವನ್ನು ನುಡಿದಿದ್ದ. ಆದರೆ ಆತನನ್ನು ಸರಕಾರಿ ಅಭಿಯೋಜಕರು ಪಾಟೀಸವಾಲಿಗೊಳಪಡಿಸಿದ ಬಳಿಕವೂ ವಿಚಾರಣಾ ನ್ಯಾಯಾಲಯವು ಆತನ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ರಸ್ತೆಯ ಆಚೆಬದಿಯಲ್ಲಿ ಸಾವಿರಾರು ಜನರು ಸೇರಿದ್ದರು. ಕೆಲ ಸೆಕೆಂಡ್ಗಳ ಕಾಲ ಅವರನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಬಳಿಕ ಅಲ್ಲಿಂದ ತೆರಳಿದ್ದೆ. ಗುಂಪಿನಲ್ಲಿದ್ದ ಯಾರನ್ನೂ ತಾನು ಗುರುತಿಸಿರಲಿಲ್ಲ ಎಂದು ಮೊದಲು ಹೇಳಿಕೆ ನೀಡಿದ್ದ ಯಾದವ್ ಪ್ರತಿಕೂಲ ಸಾಕ್ಷಿಯಾಗಿ ತಿರುಗಿ ಬಿದ್ದ ಬಳಿಕ ಪಾಟೀಸವಾಲಿನ ಸಂದರ್ಭದಲ್ಲಿ,ಪಿಕಪ್ ವ್ಯಾನ್ನಲ್ಲಿದ್ದ ವ್ಯಕ್ತಿಗಳು (ಖಾನ್ ಮತ್ತವರ ಪುತ್ರ) ರಸ್ತೆಯಲ್ಲಿ ನಿಂತಿದ್ದರು ಮತ್ತು ದಯಾನಂದ ಸೇರಿದಂತೆ ಗ್ರಾಮದ ಕೆಲವರು ಅವರನ್ನು ಥಳಿಸುತ್ತಿದ್ದರು. ಹೊಡೆಯುವುದನ್ನು ನಿಲ್ಲಿಸುವಂತೆ ತಾನು ಅವರನ್ನು ಕೇಳಿಕೊಂಡಿದ್ದೆ,ಆದರೆ ಅವರು ತನ್ನ ಮಾತನ್ನು ಲೆಕ್ಕಿಸಿರಲಿಲ್ಲ ಮತ್ತು ಥಳಿತವನ್ನು ಮುಂದುವರಿಸಿದ್ದರು ಎಂದು ಹೇಳಿದ್ದ. ಆದರೆ ಇದನ್ನು ನ್ಯಾಯಾಲಯವು ಕಿವಿಗೇ ಹಾಕಿಕೊಂಡಿರಲಿಲ್ಲ!
ಕೃಪೆ: Thewire.in







