ಈ ಬಾರಿಯೂ ಪರೀಕ್ಷೆ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳ ತೇರ್ಗಡೆ ?: ಸಚಿವ ಸುಧಾಕರ್ ಹೇಳಿದ್ದು ಹೀಗೆ...

ಬೆಂಗಳೂರು, ಮಾ. 28: ‘ರಾಜ್ಯದಲ್ಲಿ ಒಂದು ವಾರದಿಂದ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಗೃಹ, ಕಂದಾಯ, ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
‘ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೊರೋನ ಎರಡನೆ ಅಲೆ ಏರಿಕೆ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಲಾಕ್‍ಡೌನ್, ಸೀಲ್‍ಡೌನ್ ನೋಡುತ್ತಿದ್ದೇವೆ. ಎಲ್ಲ ವಿಚಾರಗಳ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು' ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷ ಒಂದರಿಂದ 9ನೆ ತರಗತಿಯವರೆಗೆ ಎಲ್ಲ ಮಕ್ಕಳನ್ನು ಉತ್ತೀರ್ಣ ಮಾಡಬೇಕು ಎಂದು ಸರಕಾರ ಸೂಚಿಸಿದೆ. ಪರೀಕ್ಷೆ ನಡೆಸದೆ ಮಕ್ಕಳ ತೇರ್ಗಡೆ ಮಾಡುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಜೊತೆ ಚರ್ಚೆ ನಡೆಸುತ್ತೇನೆ ಎಂದು ಸುಧಾಕರ್ ತಿಳಿಸಿದರು.
ಕೋವಿಡ್ ಪ್ರಕರಣಗಳ ಏರಿಕೆ: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರತಿನಿತ್ಯ ಮೂರು ಸಾವಿರ ಪ್ರಕರಣಗಳು ಬರುತ್ತಿದೆ. ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಜೊತೆಗೆ ಬೆಂಗಳೂರಿಗೆ ಬರುವವರ ಬಗ್ಗೆ ತೀವ್ರ ನಿಗಾ ಇರಿಸಬೇಕಾದ ಅಗತ್ಯವಿದೆ ಎಂದು ಸುಧಾಕರ್ ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಮುಂದಿನ ಏಳೆಂಟು ವಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ತಾಂತ್ರಿಕ ಸಲಹಾ ಸಮಿತಿಯಿಂದಲೂ ವರದಿ ಬಂದಿದೆ. ಗಡಿ ಬಂದ್ ಮಾಡಬಾರದು ಎಂದು ಕೇಂದ್ರ ಸರಕಾರದ ಸ್ಪಷ್ಟ ಸೂಚನೆ ಇದೆ. ಆದರೆ, ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
‘ಕಳೆದ ವರ್ಷ ಲಾಕ್‍ಡೌನ್ ಅನಿವಾರ್ಯವಾಗಿತ್ತು. ಈ ವರ್ಷ ಲಸಿಕೆ ಎಂಬ ರಾಮಬಾಣ ನಮಗೆ ವರವಾಗಿ ಸಿಕ್ಕಿದೆ. ಎಲ್ಲ ಅರ್ಹ ವ್ಯಕ್ತಿಗಳು ಕೂಡಲೇ ನೋಂದಣಿ ಮಾಡಿಕೊಂಡು ತಪ್ಪದೇ ಕೊರೋನ ಲಸಿಕೆ ಪಡೆಯಬೇಕೆಂದು ಮನವಿ ಮಾಡುತ್ತೇನೆ. ಲಸಿಕೆ ಹಾಕಿಸಿ, ಕೋವಿಡ್-19 ಮುನ್ನೆಚ್ಚರಿಕೆಯೂ ಪಾಲಿಸಿ'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ







