ಕುಂದಾಪುರ: ಸರಕಾರಿ ಶಾಲೆ ಉಳಿವಿಗಾಗಿ ಶಿಕ್ಷಕಿಯಿಂದ ಠೇವಣಿ ಯೋಜನೆ; ತನ್ನ ಸ್ವಂತ ದುಡಿಮೆಯ ಹಣ ಬಳಕೆ
ಪ್ರತಿವರ್ಷ ಮಕ್ಕಳ ಸಂಖ್ಯೆಯಲ್ಲಿ ಪ್ರಗತಿ

ಕುಂದಾಪುರ, ಮಾ. 28: ಆಂಗ್ಲ ಭಾಷೆಯ ಪ್ರಭಾವಕ್ಕೆ ಸಿಲುಕಿ ಕಣ್ಣು ಮಚ್ಚುತ್ತಿರುವ ಸರಕಾರಿ ಶಾಲೆಗಳನ್ನು ಉಳಿಸಲು ಹಲವು ಮಂದಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಇಲ್ಲೊಬ್ಬರು ಶಿಕ್ಷಕಿ ತಾನು ಬೋಧಿಸುವ ಶಾಲೆಗೆ ಸೇರುವ ಮಕ್ಕಳ ಹೆಸರಲ್ಲಿ ತನ್ನ ದುಡಿಮೆ ಹಣದಿಂದ ಒಂದು ಸಾವಿರ ರೂ. ಠೇವಣಿ ಇಟ್ಟು ಬಾಂಡ್ ನೀಡುವ ಮೂಲಕ ಶಾಲೆಯನ್ನು ಉಳಿಸುವ ಕಾಯಕ ದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಕುಂದಾಪುರ ತಾಲೂಕು ಶಂಕರನಾರಾಯಣ ಬಿದಲ್ಕ್‌ಕಟ್ಟೆಯ ರೇಖಾ ಪ್ರಭಾಕರ (33) ಈ ಮಾದರಿ ಶಿಕ್ಷಕಿಯಾಗಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಹೋಬಳಿ ನೂಲಗ್ಗೇರಿ ಸರಕಾರಿ ಶಾಲೆಯಲ್ಲಿ ಈ ವಿನೂತನ ಯೋಜನೆ ಯನ್ನು ಆಳವಡಿಸಿಕೊಂಡಿದ್ದಾರೆ.
ರೇಖಾ 2010ರಲ್ಲಿ ನೂಲಗ್ಗೇರಿ ಸರಕಾರಿ ಶಾಲೆಯಲ್ಲಿ ಶಿಕ್ಷಕಯಾಗಿ ಸೇರ್ಪಡೆ ಗೊಂಡಿದ್ದು, ಈ ಸಂದರ್ಭದಲ್ಲಿ ಶಾಲೆಯಲ್ಲಿ 1 ರಿಂದ 7 ತರಗತಿಯಲ್ಲಿ ಕೇವಲ 20 ಮಕ್ಕಳು ಮಾತ್ರ ಕಲಿಯುತ್ತಿದ್ದರು. ಪ್ರತಿವರ್ಷ 2 ರಿಂದ 3 ಮಕ್ಕಳು ಮಾತ್ರ ಈ ಶಾಲೆಗೆ ಹೊಸದಾಗಿ ಸೇರುತ್ತಿದ್ದರು. ಇದರಿಂದ ಈ ಶಾಲೆಯು ಮುಚ್ಚುವ ಹಂತಕ್ಕೆ ಬಂದು ತಲುಪಿತು. ಅದಕ್ಕಾಗಿ ರೇಖಾ, ಮಕ್ಕಳ ಸಂಖ್ಯೆ ಹೆಚ್ಚಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡಿದರು. ಪಾಲಕರು, ಊರ ಹಿರಿಯರ ಭೇಟಿಯಾಗಿ ಮನ ಒಲಿಸುವ ಪ್ರಯತ್ನ ಮಾಡಿದರು. ಆದರೆ ಯಾವುದು ಕೂಡ ಫಲ ನೀಡಲಿಲ್ಲ.
ಶಿಕ್ಷಕಿಯ ಠೇವಣಿ ಯೋಜನೆ: ಮಕ್ಕಳ ಸಂಖ್ಯೆ ಹೆಚ್ಚಿಸುವ ಪ್ರಯತ್ನಕ್ಕೆ ಎಲ್ಲೂ ಸ್ಪಂದನೆ ದೊರೆಯದಿದ್ದಾಗ ಈ ಶಿಕ್ಷಕಿಗೆ ಹೊಳೆದದ್ದು ಠೇವಣಿ ಯೋಜನೆ. ಅದಕ್ಕಾಗಿ ಶಿಕ್ಷಕಿ ರೇಖಾ ತನ್ನ ದುಡಿಮೆ ಹಣವನ್ನೇ ಬಳಸಿಕೊಂಡಿರುವುದು ವಿಶೇಷವಾಗಿದೆ.
2013-14ರಲ್ಲಿ ಈ ಠೇವಣಿ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯಂತೆ ಒಂದನೆ ತರಗತಿಗೆ ಸೇರುವ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ಠೇವಣಿ ಇಟ್ಟು, ಆ ಮಗು ಹತ್ತನೇ ತರಗತಿ ಮುಗಿಸಿದ ತಕ್ಷಣ ಬಡ್ಡಿ ಸಮೇತ ಹಣ ದೊರಕುವಂತೆ ಮಾಡುವುದಾಗಿದೆ.
ಈ ಯೋಜನೆಗಾಗಿ ಯಾರಲ್ಲೂ ಹಣ ಕೇಳದ ರೇಖಾ, ತನ್ನ ಸ್ವಂತ ಹಣವನ್ನೇ ಬಳಸಿಕೊಂಡರು. ಇದಕ್ಕೆ ರೇಖಾ ಅವರ ಪತಿ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಬೆಂಬಲವಾಗಿ ನಿಂತರು. ಈ ಯೋಜನೆ ಪರಿಣಾಮ ಶಾಲೆಯಲ್ಲಿ ಪ್ರತಿ ವರ್ಷ ಮಕ್ಕಳ ದಾಖಲಾತಿಯಲ್ಲಿ ಏರಿಕೆ ಕಂಡುಬಂತು. ಹೊಸದಾಗಿ ವರ್ಷಕ್ಕೆ 10ಕ್ಕೂ ಅಧಿಕ ಮಕ್ಕಳ ಸೇರ್ಪಡೆಗೊಳ್ಳು ತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 83 ಮಕ್ಕಳಿದ್ದು 63 ಮಕ್ಕಳು ಬಾಂಡ್ ಸೌಲಭ್ಯ ಪಡೆಯುತ್ತಿದ್ದಾರೆ.
‘ನಾನು ಮತ್ತು ನನ್ನ ಪತಿ ಬಡತನದಲ್ಲೆ ಬೆಳೆದವರು. ನಮ್ಮ ವಿದ್ಯಾಭ್ಯಾಸಕ್ಕೆ ಸಮಾಜ ತುಂಬ ನೆರವಾಗಿದೆ. ಅದರ ಪರಿಣಾಮ ನಮಗೆ ಇಬ್ಬರಿಗೂ ಸರಕಾರಿ ನೌಕರಿ ಸಿಕ್ಕಿದೆ, ಅದಕ್ಕೆ ನಾವೂ ನಮ್ಮ ಕೈಲಾದಷ್ಟು ಮಕ್ಕಳ ಶಿಕ್ಷಣಕ್ಕೆ ನೆರವಾಗ ಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದೇವೆ. ಸಮಾಜದ ಋಣ ಹೀಗಾದರೂ ಸ್ವಲ್ಪ ತೀರಿಸುವ ಅವಕಾಶ ನಮ್ಮ ಪಾಲಿಗೆ ದೊರೆತಿದೆ.
-ರೇಖಾ ಪ್ರಭಾಕರ್, ಶಿಕ್ಷಕಿ








