ವಾರ್ಡ್ ಸಮಿತಿಗಳ ರಚನೆ ಪ್ರಯತ್ನ ತೀವ್ರಗೊಳಿಸಲು ಎಂಸಿಸಿ ಸಿವಿಕ್ ಗ್ರೂಪ್ ನಿರ್ಧಾರ
ಮಂಗಳೂರು, ಮಾ. 28: ಸ್ಥಳೀಯಾಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು 2015ರಲ್ಲಿ ರಚನೆಯಾದ ಎಂಸಿಸಿ ಸಿವಿಕ್ ಗ್ರೂಪ್, ಮಂಗಳೂರು ಮಹಾನಗರಪಾಲಿಕೆ ವಾರ್ಡ್ ಸಮಿತಿಗಳ ರಚನೆಗೆ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ಧರಿಸಿದೆ.
ಬಿಜೈ ಬೆಜೈ ಚರ್ಚ್ ರಸ್ತೆಯ ಕ್ಯಾಮೆಲಾಟ್‌ನಲ್ಲಿ ಇತ್ತೀಚೆಗೆ ನಡೆದ ಸಂಘಟನೆಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. 1993ರಲ್ಲಿ ಜಾರಿಗೆ ಬಂದ 74ನೇ ಭಾರತೀಯ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಸಾಂಸ್ಥೀಕರಣಗೊಳಿಸಲು ಕಡ್ಡಾಯಗೊಳಿಸಿದೆ. 2019ರಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಾಲಯ ತನ್ನ ಆದೇಶದಲ್ಲಿ ಮಂಗಳೂರು ಮಹಾ ನಗರಪಾಲಿಕೆ ತಕ್ಷಣ ವಾರ್ಡ್ ಸಮಿತಿಗಳನ್ನು ರಚಿಸುವಂತೆ ತೀರ್ಪು ನೀಡಿತು. ಎಂಸಿಸಿ ಸಿವಿಕ್ ಗ್ರೂಪ್ ಹೈಕೋರ್ಟ್‌ಗೆ ಪ್ರಮುಖ ಅರ್ಜಿದಾರರಾಗಿದ್ದರು.
ಎಂಸಿಸಿ ಸಿವಿಕ್ ಗ್ರೂಪ್‌ನ ಸದಸ್ಯರು ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಅವರನ್ನು ಭೇಟಿ ಮಾಡಿ ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆ ಗಳನ್ನು ರಚಿಸುವಂತೆ ಕೋರಿಕೊಂಡಿತ್ತು. ಇದಕ್ಕೆ ಒಪ್ಪಿದ್ದ ಆಯುಕ್ತರು ಡಿಸೆಂಬರ್‌ನಲ್ಲಿ ವಾರ್ಡ್ ಸಮಿತಿ ಅರ್ಜಿ ನಮೂನೆ ಸಲ್ಲಿಸಲು ಸೂಚಿಸಿದ್ದರು. ಅದರಂತೆ 1,200ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಮೂರು ತಿಂಗಳದರೂ ಇನ್ನೂ ಯಾವುದೇ ವಾರ್ಡ್ ಸಮಿತಿ ರಚನೆಯಾಗಿಲ್ಲ ಎಂದು ಸಿವಿಕ್ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ನೈಜೆಲ್ ಅಲ್ಬುಕರ್ಕ್, ಎಚ್.ಪ್ರತಾಪಚಂದ್ರ ಕೇದಿಲಾಯ, ಜೆರಾರ್ಡ್ ಟವರ್ಸ್, ಸುರೇಶ್ ನಾಯಕ್, ಭಾಸ್ಕರ್ ಕಿರಣ್, ಮರಿಯೆಟ್ ಫೆನಾರ್ಂಡಿಸ್, ಪ್ರಶಾಂತ್ ಮಣ್ಣಗುಡ್ಡೆ, ರೋಸಿ ಮರಿಯಾ ಡಿಸಿಲ್ವಾ, ಅರುಣ್ ಜೆ.ಡಿಸೋಜ, ಓಸ್ವಾಲ್ಡ್ ಪಿರೇರಾ, ರೋನಿ ಕ್ರಾಸ್ತಾ , ಅಜೋಯ್ ಡಿಸಿಲ್ವಾ, ಮೀನಾ ಮಲಾನಿ, ಪದ್ಮನಾಭ ಉಳ್ಳಾಲ, ಆನಂದ್ ರಾವ್, ಅಬ್ದುಲ್ ಹಮೀದ್, ಜಯರಾಮ್ ಶ್ರೀಯಾನ್ ಉಪಸ್ಥಿತರಿದ್ದರು.







