ಬಜೆ ಅಣೆಕಟ್ಟಿನಲ್ಲಿ 5.26ಮೀಟರ್ ನೀರಿನ ಸಂಗ್ರಹ: ಜೂನ್ ತಿಂಗಳವರೆಗೆ ನೀರು ಪೂರೈಸಲು ಕಾರ್ಯ ಯೋಜನೆ

ಉಡುಪಿ, ಮಾ. 28: ಬಿಸಿಲಿನ ಝಳ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಪಂ ಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಅನುಸಾರ ಜೂನ್ ತಿಂಗಳವರೆಗೆ ನೀರು ಪೂರೈಸಲು ಅಧಿಕಾರಿಗಳು ಕಾರ್ಯ ಯೋಜನೆಗಳನ್ನು ರೂಪಿಸಿದ್ದಾರೆ.
ಮಾ.28ರಂದು ಬಜೆ ಅಣೆಕಟ್ಟಿನಲ್ಲಿ 5.26ಮೀಟರ್ ನೀರಿನ ಸಂಗ್ರಹ ಇದ್ದು, ಕಳೆದ ವರ್ಷ ಇದೇ ದಿನ ಬಜೆಯಲ್ಲಿ ನೀರಿನ ಸಂಗ್ರಹ 5.04 ಮೀಟರ್ ನಷ್ಟಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ನೀರಿನ ಸಂಗ್ರಹ 21ಸೆ.ಮೀಟರ್‌ನಷ್ಟು ಹೆಚ್ಚಿದೆ.
6 ದಿನಗಳ ಹೆಚ್ಚುವರಿ ನೀರು: ಪ್ರಸ್ತುತ ಶಿರೂರಿನಲ್ಲಿ ಒಳ ಹರಿವು ಈಗಲೂ ಮುಂದುವರೆದಿದ್ದು, ಸದ್ಯಕ್ಕೆ ಶಿರೂರು ಮತ್ತು ಬಜೆ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹದಲ್ಲಿ ಮುಂದಿನ 58-60 ದಿನಗಳ ನೀರು ಪೂರೈಕೆ ಮಾಡ ಬಹುದು ಎಂಬುದು ನಗರಸಭೆ ಅಧಿಕಾರಿಗಳ ಲೆಕ್ಕಚಾರ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ಲೆಕ್ಕಚಾರ ಹಾಕಿದರೆ ಈ ಎರಡು ಕಡೆಗಳಲ್ಲಿ 6-7 ದಿನಗಳ ಹೆಚ್ಚುವರಿ ನೀರಿನ ಸಂಗ್ರಹ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ ಪಂಪಿಂಗ್ ಮಾಡಿ ಪೂರೈಕೆ ಮಾಡಿದರೂ 58-60 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹವು ಬಜೆ ಡ್ಯಾಂನಲ್ಲಿದೆ. ಅಂದರೆ ಮೇ ಅಂತ್ಯ ದವರೆಗೂ ನೀರು ನೀಡಬಹುದಾಗಿದೆ. ಕಳೆದ ವರ್ಷ ಮೇ 18ಕ್ಕೆ ಮಳೆ ಬಂದಿದ್ದು, ಈ ವರ್ಷ ಮೇ 25 ಒಳಗಡೆ ಮಳೆ ಬಂದರೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಅಧಿಕಾರಿಗಳ ವಿಶ್ವಾಸ.
ಈಗ ಇರುವ ನೀರಿನ ಸಂಗ್ರಹ 5.26 ಮೀಟರ್‌ನಲ್ಲಿ 1.26 ಡೆಡ್ ಸ್ಟೋರೇಜ್ ಆಗಿದೆ. ಅಂದರೆ ಇಲ್ಲಿರುವ 400ಸೆ.ಮೀಟರ್‌ನಷ್ಟು ಮಾತ್ರ ನೀರನ್ನು ಪಂಪ್ ಮಾಡಲು ಸಾಧ್ಯ. ದಿನಕ್ಕೆ 10ಸೆ.ಮೀಟರ್‌ನಷ್ಟು ನೀರು ಪಂಪಿಂಗ್ ಮಾಡಿದರೂ 40ದಿನಗಳ ನೀರು ಪಂಪ್ ಮಾಡಬಹುದು. ನಮ್ಮಲ್ಲಿ ದಿನಕ್ಕೆ ನೀರು ಖರ್ಚಗುವುದು 6.7 ಸೆ.ಮೀ. ನೀರು ಮಾತ್ರ. ಆ ರೀತಿ ಲೆಕ್ಕಚಾರ ಹಾಕಿದರೆ ನಮ್ಮಲ್ಲಿ 60 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಪಿಂಗ್‌ಗೆ ಟೆಂಡರ್: ಒಂದು ವೇಳೆ ಜೂನ್ ತಿಂಗಳಲ್ಲಿ ಮಳೆ ಬರು ವುದು ವಿಳಂಬವಾದರೆ ಬಜೆಯಿಂದ ಶಿರೂರುವರೆಗೆ ಸಾಣೆಕಲ್ಲು, ಪುತ್ತಿಗೆ, ಬ್ರಹ್ಮ ಹೊಂಡ, ಶಿರೂರು ಮಠ, ಭಂಡಾರಿಬೆಟ್ಟು ಸೇರಿದಂತೆ 7-8 ಕಡೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳಲ್ಲಿರುವ ನೀರನ್ನು ಬಳಸಿಕೊಳ್ಳಲಾಗುತ್ತದೆ.
ಈ ಹೊಂಡಗಳಲ್ಲಿ 10 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇವೆ. ಈ ನೀರನ್ನು ಪಂಪಿಂಗ್ ಮಾಡಿ ಹರಿಯುವಂತೆ ಮಾಡಲು ಈಗಲೇ ಟೆಂಡರ್ ಕರೆದು ಸಿದ್ಧವಾಗಿಟ್ಟುಕೊಳ್ಳಲು ನಗರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಳೆದ ವರ್ಷ ಬೇಸಿಗೆಯಲ್ಲಿ ನಗರಸಭೆಯಿಂದ ಪ್ರತಿದಿನ ನೀರು ಪೂರೈಕೆ ಮಾಡಿದ್ದೇವೆ. ಈ ಬಾರಿ ಕೂಡ ನೀರು ಪೂರೈಕೆ ಮಾಡಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಬಾರಿ ಜನವರಿ ತಿಂಗಳಲ್ಲಿಯೇ ಬಜೆಯಲ್ಲಿ ಎರಡು ಕಡೆಗಳಲ್ಲಿ, ಶಿರೂರುನಲ್ಲಿ ಒಂದು ಕಡೆಗಳಲ್ಲಿ ಡ್ಯಾಂ ಕಟ್ಟಲಾಗಿದೆ. ಹೀಗೆ ಜನವರಿಯಲ್ಲಿಯೇ ನೀರಿನ ಸಂಗ್ರಹ ಇಟ್ಟು ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ರಾಜ್ ತಿಳಿಸಿದ್ದಾರೆ.
ಶಾಸಕ ರಘುಪತಿ ಭಟ್‌ರಿಂದ ಪರಿಶೀಲನೆ
ಶಿರೂರು ಡ್ಯಾಮ್ ಹಾಗೂ ಬಜೆ ಡ್ಯಾಮ್ಗೆ ಶಾಸಕ ಕೆ.ರಘುಪತಿ ಭಟ್ ರವಿವಾರ ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಲಿರುವುದರಿಂದ ನೀರಿನ ಪಂಪಿಂಗ್ ಹಾಗೂ ನೀರಿನ ಪೂರೈಕೆಗೆ ಬೇಕಾಗುವ ಪೂರ್ವ ತಯಾರಿ ಯನ್ನು ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸದಸ್ಯ ಮಂಜುನಾಥ್ ಮಣಿಪಾಲ್, ಪೌರಾಯುಕ್ತ ಡಾ.ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ರಾಜ್, ಅಭಿಯಂತರ ದುರ್ಗಾಪ್ರಸಾದ್ ಉಪಸ್ಥಿತರಿದ್ದರು.








