"ಏಕರೂಪ ನಾಗರಿಕ ಸಂಹಿತೆ ಏನೆಂದು ತಿಳಿಯಬೇಕಾದರೆ ಗೋವಾಕ್ಕೆ ಭೇಟಿ ನೀಡಿ": ಸಿಜೆಐ ಬೋಬ್ಡೆ

ಪಣಜಿ,ಮಾ.28: ಗೋವಾದಲ್ಲಿನ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಪ್ರಶಂಸಿಸಿರುವ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎಸ್.ಎ.ಬೋಬ್ಡೆ ಅವರು,ಉದ್ದೇಶಿತ ಕಾನೂನುಗಳ ಬಗ್ಗೆ ಚರ್ಚಿಸುತ್ತಿರುವ ಬುದ್ಧಿಜೀವಿಗಳು ಈ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿ ಜಾರಿಯಲ್ಲಿರುವ ನ್ಯಾಯದ ಆಡಳಿತವನ್ನು ನೋಡಬೇಕು ಎಂದು ಹೇಳಿದ್ದಾರೆ.
ಶನಿವಾರ ಇಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ನ್ಯಾ.ಬೋಬ್ಡೆ ಅವರು,ಸಂವಿಧಾನ ರಚನೆಕಾರರು ಭಾರತಕ್ಕಾಗಿ ರೂಪಿಸಿದ್ದ ಏಕರೂಪ ನಾಗರಿಕ ಸಂಹಿತೆಯು ಗೋವಾದಲ್ಲಿ ವರ್ಷಗಳಿಂದಲೂ ಜಾರಿಯಲ್ಲಿದೆ. ಮದುವೆ ಮತ್ತು ಉತ್ತರಾಧಿಕಾರ ವಿಷಯಗಳಲ್ಲಿ ಧರ್ಮವನ್ನು ಪರಿಗಣಿಸದೆ ಎಲ್ಲ ಗೋವನ್ನರಿಗೂ ಅದು ಅನ್ವಯಿಸುತ್ತದೆ. ಯುಸಿಸಿಯ ಬಗ್ಗೆ ಬುದ್ಧಿಜೀವಿಗಳ ಚರ್ಚೆಗಳ ಕುರಿತು ತಾನು ಸಾಕಷ್ಟು ಕೇಳಿದ್ದೇನೆ. ಯುಸಿಸಿ ಎಂದರೆ ಏನು ಎನ್ನುವುದನ್ನು ತಿಳಿದುಕೊಳ್ಳಲು ಗೋವಾಕ್ಕೆ ಭೇಟಿ ನೀಡುವಂತೆ ಮತ್ತು ಇಲ್ಲಿಯ ನ್ಯಾಯದ ಆಡಳಿತವನ್ನು ಕಣ್ಣಾರೆ ನೋಡುವಂತೆ ತಾನು ಆ ಎಲ್ಲ ಬುದ್ಧಿಜೀವಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಗೋವಾ ಯುಸಿಸಿ ಜಾರಿಯಲ್ಲಿರುವ ಭಾರತದ ಏಕಮಾತ್ರ ರಾಜ್ಯವಾಗಿದೆ.
ಗೋವಾದಲ್ಲಿ ಕಳೆದ ನಾಲ್ಕೂವರೆ ಶತಮಾನಗಳಿಗೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿರುವ ನ್ಯಾಯದ ಆಡಳಿತದ ಪರಂಪರೆಯ ಬಗ್ಗೆಯೂ ಮಾತನಾಡಿದ ನ್ಯಾ.ಬೋಬ್ಡೆ,ಬಾಂಬೆ ಉಚ್ಚ ನ್ಯಾಯಾಲಯದ ಗೋವಾ ಪೀಠವು ಕೇವಲ 30 ವರ್ಷಗಳಷ್ಟು ಹಳೆಯದಾಗಿದ್ದರೂ ಅದು ನ್ಯಾಯಾಂಗ ಶಿಷ್ಟಾಚಾರದ ಅತ್ಯುನ್ನತ ಸಂಪ್ರದಾಯಗಳನ್ನು ಕಾಯ್ದುಕೊಂಡಿರುವುದು ಮಾತ್ರವಲ್ಲ,ಕಾನೂನಿನ ಅಭಿವೃದ್ಧಿಯಲ್ಲಿಯೂ ಮಹತ್ವದ ಕೊಡುಗೆಯನ್ನು ನೀಡಿದೆ ಎಂದರು.
ಮುಂಬೈನಲ್ಲಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ನೂತನ ಕಟ್ಟಡದ ಅಗತ್ಯಕ್ಕೆ ಒತ್ತು ನೀಡಿದ ಅವರು, ಅಲ್ಲಿಯ ಕಟ್ಟಡವನ್ನು ಏಳು ನ್ಯಾಯಾಧೀಶರಿಗಾಗಿ ನಿರ್ಮಿಸಲಾಗಿತ್ತು, ಆದರೆ ಅಲ್ಲೀಗ 40ಕ್ಕೂ ಅಧಿಕ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ ಪ್ರಸಾದ ಮತ್ತು ಭಾವಿ ಸಿಜೆಐ ನ್ಯಾ.ರಮಣ ಅವರು ಗಮನಿಸಲಿದ್ದಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.







