ದ.ಕ.ಜಿಲ್ಲೆಯ ಹಲವೆಡೆ ಪೂರ್ವ ಮುಂಗಾರು ಮಳೆ
ಮಂಗಳೂರು, ಮಾ.28: ದ.ಕ ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಪೂರ್ವ ಮುಂಗಾರು ಮಳೆಯಾಗಿದೆ. ಈ ಮಧ್ಯೆ ರವಿವಾರ ಭಾರೀ ಸೆಕೆ ಮತ್ತು ಮೋಡ ಕವಿದ ವಾತಾವರಣ ಕಂಡು ಬಂದಿದೆ. ಅಲ್ಲದೆ ರವಿವಾರ ರಾತ್ರಿ ಜಿಲ್ಲೆಯ ಕೆಲವು ಕಡೆ ಮಳೆಯಾಗಿದೆ.
ಜಿಲ್ಲೆಯ ಪುತ್ತೂರು, ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲಿ ಎರಡ್ಮೂರು ದಿನದಿಂದ ಸುರಿಯುತ್ತಿದ್ದ ಮಳೆಯು ಶನಿವಾರ ರಾತ್ರಿ ಮಂಗಳೂರು ತಾಲೂಕಿನ ಹಲವೆಡೆ ಕಂಡು ಬಂತು. ನಗರ ಮತ್ತು ಹೊರವಲಯದ ಉಳ್ಳಾಲ, ದೇರಳಕಟ್ಟೆ, ಕೊಣಾಜೆ, ಹರೇಕಳ, ಪಾವೂರು, ಪಜೀರ್, ಬೋಳಿಯಾರು, ಅಡ್ಯಾರು ಮತ್ತಿತರ ಕಡೆ ರಾತ್ರಿ ಸುಮಾರು 12:15ರಿಂದ 1ಗಂಟೆಯವರೆಗೆ ಸಿಡಿಲು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ರವಿವಾರವೂ ಸೆಕೆಯ ವಾತಾವರಣವಿದ್ದು ಸಂಜೆ ವೇಳೆ ಬಂಟ್ವಾಳ, ಬೆಳ್ತಂಗಡಿ, ಗುರುಪುರ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಮೂಡುಬಿದಿರೆಯಲ್ಲಿ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ರವಿವಾರ ಗರಿಷ್ಠ 36.4 ಡಿಗ್ರಿ ಹಾಗೂ ಕನಿಷ್ಠ 24.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





