ಪೊಂಜಿ ಕಂಪನಿಯ ಪ್ರವರ್ತಕ ಸೌದಿಯಿಂದ ಗಡಿಪಾರು,ಬಂಧನ

ಹೊಸದಿಲ್ಲಿ,ಮಾ.28: ಪೊಂಜಿ ಸ್ಕೀಮೊಂದರ ಮೂಲಕ ಜನರಿಗೆ ಸುಮಾರು 10 ಕೋ.ರೂ.ಗಳನ್ನು ವಂಚಿಸಿದ್ದ ಸುದೀರ ಮುಹಮ್ಮದ್ ಚೆರಿಯ ವನ್ನಾರಕ್ಕಾಲ್ ಎಂಬಾತನನ್ನು ಇಂಟರ್ಪೋಲ್ ರೆಡ್ ನೋಟಿಸಿನ ಮೇರೆಗೆ ಸೌದಿ ಅರೇಬಿಯವು ಭಾರತಕ್ಕೆ ಗಡಿಪಾರುಗೊಳಿಸಿದ್ದು, ಸಿಬಿಐ ಆತನನ್ನು ಬಂಧಿಸಿದೆ. ಆರೋಪಿಯನ್ನು ಎರ್ನಾಕುಲಂ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು,ಎ.8ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಚೆರಿಯ ಮತ್ತು ಆತನ ಪಾಲುದಾರರು 2009-11ರ ನಡುವಿನ ಅವಧಿಯಲ್ಲಿ ಕೇರಳದ ಕಾಸರಗೋಡಿನಲ್ಲಿ ಫಾರೆಕ್ಸ್ ಟ್ರೇಡ್ ಹೆಸರಿನ ಪೊಂಜಿ ಕಂಪನಿಯೊಂದನ್ನು ಹುಟ್ಟುಹಾಕಿದ್ದರು. 61 ದಿನಗಳ ಠೇವಣಿಗೆ ಅತ್ಯಧಿಕ ಬಡ್ಡಿ ನೀಡುವುದಾಗಿ ಹೂಡಿಕೆದಾರರನ್ನು ನಂಬಿಸಿದ್ದ ಅವರು ಏಜೆಂಟರಿಗೆ ಪ್ರತಿ ತಿಂಗಳು ಶೇ.2ರಷ್ಟು ಕಮಿಷನ್ ನೀಡುವ ಆಮಿಷವನ್ನೂ ಒಡ್ಡಿದ್ದರು.
ಸ್ಕೀಮ್ ನ ಮೂಲಕ ಜನರಿಂದ 9.98 ಕೋ.ರೂ.ಗಳನ್ನು ಸಂಗ್ರಹಿಸಿದ್ದ ಚೆರಿಯ ಅಸಲು ಮತ್ತು ಬಡ್ಡಿಯನ್ನು ನೀಡದೇ ಪಂಗನಾಮ ಹಾಕಿದ್ದ.
ಕೇರಳ ಉಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ರಾಜ್ಯ ಪೊಲೀಸರಿಂದ ಪ್ರಕರಣವನ್ನು ಹಸ್ತಾಂತರಿಸಿಕೊಂಡಿದ್ದ ಸಿಬಿಐ ಚೆರಿಯ,ಆತನ ಸಹಚರರು ಮತ್ತು ಕಂಪನಿಯ ವಿರುದ್ಧ ಐದು ಪ್ರಕರಣಗಳನ್ನು ದಾಖಲಿಸಿತ್ತು.
ಚೆರಿಯ ಸೌದಿ ಅರೇಬಿಯದಲ್ಲಿ ತಲೆಮರೆಸಿಕೊಂಡಿದ್ದನ್ನು ಪತ್ತೆ ಹಚ್ಚಿದ ಸಿಬಿಐ ಇಂಟರ್ಪೋಲ್ ನೆರವಿನಿಂದ ಆತನನ್ನು ಭಾರತಕ್ಕೆ ಗಡಿಪಾರು ಮಾಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅದರ ವಕ್ತಾರ ಆರ್.ಸಿ.ಜೋಶಿ ತಿಳಿಸಿದರು.





