ಕಾವೇರಿ ಕೂಗು ಯೋಜನೆ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಬೆಂಗಳೂರು, ಮಾ.28: ಕಾವೇರಿ ಕೂಗು ಯೋಜನೆಯಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವಿಚಾರವಾಗಿ ದಾಖಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ಆಗಿ ದಾಖಲಿಸಿಕೊಂಡಿರುವುದನ್ನು ಪ್ರಶ್ನಿಸಿ ಈಶ ಔಟ್ ರೀಚ್ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.
ಈಶ ಫೌಂಡೇಶನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದನ್ನು ಪ್ರಶ್ನಿಸಿ ವಕೀಲ ಎ.ವಿ. ಅಮರನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಕಳೆದ 2020ರ ಅ.15ರಂದು ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿತ್ತು. ವಕೀಲ ಎ.ವಿ. ಅಮರನಾಥ್, ಪ್ರಕರಣದ ವಿಚಾರವಾಗಿ ಅಂತರರಾಷ್ಟ್ರೀಯ ವಾಹಿನಿಯೊಂದಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿ ಕೋರ್ಟ್‍ಗೆ ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಳ್ಳಲಾಗಿತ್ತು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ ವೇಳೆ, ಈಶ ಔಟ್ ರೀಚ್ ಪರ ಪಕೀಲರು ಪೀಠಕ್ಕೆ ಮಾಹಿತಿ ನೀಡಿ, ಹೈಕೋರ್ಟ್ ಅರ್ಜಿಯನ್ನು ಸ್ವಯಂ ಪ್ರೇರಿತವಾಗಿ ಪರಿವರ್ತಿಸಿಕೊಂಡ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ ದಾಖಲಿಸಲಾಗಿದೆ ಎಂದರು. ಹೇಳಿಕೆ ದಾಖಲಿಕೊಂಡ ಪೀಠ, ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತು.





