ಮರಳ ಬಿರುಗಾಳಿಗೆ ತತ್ತರಿಸಿದ ಬೀಜಿಂಗ್
ಬೀಜಿಂಗ್,ಮಾ.28: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ರವಿವಾರ ಬೆಳಗ್ಗೆ ಮರಳುಗಾಳಿ ಬೀಸಿದ್ದು, ಅತ್ಯಧಿಕ ಮಟ್ಟದ ವಿಷಕಾರಿ ಕಣಗಳನ್ನು ಒಳಗೊಂಡ ದಪ್ಪನೆಯ ಧೂಳು ಇಡೀ ನಗರವನ್ನು ಆವರಿಸಿತ್ತು. ಬರಪೀಡಿತ ಮಂಗೋಲಿಯಾ ಹಾಗೂ ವಾಯವ್ಯಚೀನಾದಿಂದ ಬೀಸುತ್ತಿರುವ ಭಾರೀ ಗಾಳಿಯಿಂದಾಗಿ ಬೀಜಿಂಗ್ ನಗರವು ಕಳೆದ ಎರಡು ವಾರಗಳಲ್ಲಿ ಮರಳುಗಾಳಿಯ ಹೊಡೆತಕ್ಕೆ ಸಿಲುಕಿರುವುದು ಎರಡನೆ ಸಲವಾಗಿದೆ.
ದಪ್ಪನೆಯ ಧೂಳು ಆವರಿಸಿದ್ದರಿಂದ ನಗರಾದ್ಯಂತ ಮಸುಕಾದ ವಾತಾವರಣ ಉಂಟಾಯಿತು.ಕೆಲವು ಗಗನಚುಂಬಿ ಕಟ್ಟಡಗಳು ಧೂಳಿನಿಂದ ಮರೆಯಾದವು.
ರವಿವಾರ ಬೆಳಗ್ಗೆ ಬೀಜಿಂಗ್‌ನ ಅಧಿಕೃತ ವಾಯು ಗುಣಮಟ್ಟ ಸೂಚ್ಯಂಕವು 500ರ ಗರಿಷ್ಠ ಮಟ್ಟವನ್ನು ತಲುಪಿತು. ಬೀಜಿಂಗ್‌ಗೆ ಅಪ್ಪಳಿಸಿರುವ ಮರಳಬಿರುಗಾಳಿಯು ಮಂಗೋಲಿಯಾದಲ್ಲಿ ಸೃಷ್ಟಿಯಾದುದೆಂದು ಹವಾಮಾನ ಇಲಾಖೆಯ ಕಚೇರಿ ತಿಳಿಸಿದೆ. ಹಾಲಿ ಬೇಸಿಗೆಯಲ್ಲಿ ತಾಪಮಾನವು ಹೆಚ್ಚಿದ್ದರಿಂದ ಮಳೆಯ ಪ್ರಮಾಣವು ಕಡಿಮೆಯಾದ ಪರಿಣಾಮ ಮರಳಬಿರುಗಾಳಿಗೆ ಅನೂಕೂಲಕರವಾದ ವಾತಾವರಣವನ್ನು ಸೃಷ್ಟಿಸಿತೆಂದು ಅದು ಹೇಳಿದೆ.
Next Story





