ಬಾಂಬ್ ದಾಳಿ: ಆರ್‌ಟಿಐ ಕಾರ್ಯಕರ್ತನಿಗೆ ಗಂಭೀರ ಗಾಯ

ಜೈಪುರ (ಒಡಿಶಾ), ಮಾ. 28: ಒಡಿಶಾದ ಜೈಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಬಾಂಬ್ ಎಸೆದ ಪರಿಣಾಮ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತರೊಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಇಮಾಮ್ ನಗರದಲ್ಲಿ ರವಿವಾರ ರಾತ್ರಿ ಬಾಂಬ್ ದಾಳಿಗೊಳಗಾದ ಸರ್ಬೇಶ್ವರ ಬೆಹುರಿಯಾ ಅವರು ಧರ್ಮಸಾಲಾ ಸಿಎಚ್‌ಸಿಯಲ್ಲಿ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ಚಿಂತಾಜನಕವಾದುದರಿಂದ ಕಟಕ್‌ನ ಎಸ್‌ಸಿಬಿ ಕಾಲೇಜು ಹಾಗೂ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಹುರಿಯಾ ಅವರು ತನ್ನ ಸಹವರ್ತಿಯೊಂದಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ತಡೆದರು ಹಾಗೂ ಬಾಂಬ್ ಎಸೆದು ಪರಾರಿಯಾದರು ಎಂದು ಅವರು ತಿಳಿಸಿದ್ದಾರೆ.
‘‘ಇದರಿಂದ ಕಾರು ಚಲಾಯಿಸುತ್ತಿದ್ದ ಬೆಹುರಿಯಾ ಅವರಿಗೆ ಗಂಭೀರ ಗಾಯಗಳಾದವು. ಅವರ ಸಹಾಯಕನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಧರ್ಮಸಾಲಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಸರೋಜ್ ಕುಮಾರ್ ಸಾಹು ಹೇಳಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.





