ಸರಕಾರಿ ಶಾಲೆಗಳನ್ನು ದತ್ತು ನೀಡುವುದು ಸಂವಿಧಾನಕ್ಕೆ ಮಾಡುವ ಅಪಚಾರ: ನಿರಂಜನಾರಾಧ್ಯ

ಬೆಂಗಳೂರು, ಮಾ.28: ರಾಜ್ಯ ಸರಕಾರ ಸರಕಾರಿ ಶಾಲೆಗಳನ್ನು ಖಾಸಗಿ ಕಂಪೆನಿಗಳು ಹಾಗೂ ಸಂಘ ಸಂಸ್ಥೆಗಳಿಗೆ ದತ್ತು ನೀಡುತ್ತಿರುವ ಕ್ರಮ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದದ್ದೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸರಕಾರಿ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ಕಾನೂನು ಬದ್ಧವಾಗಿ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯು ಶಾಲಾ ದತ್ತು ಯೋಜನೆ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಿರುವುದು ಕಾನೂನಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.
ಸರಕಾರಿ ಶಾಲೆಗಳನ್ನು ದತ್ತು ನೀಡುವುದೆಂದರೆ ಶಾಲಾ ವಿದ್ಯಾರ್ಥಿಗಳನ್ನು, ಪೋಷಕರನ್ನು ಹಾಗೂ ಶಿಕ್ಷಕರನ್ನು ದತ್ತು ಕೊಟ್ಟಂತೆಯೇ ಆಗುತ್ತದೆ. ಆ ಮೂಲಕ ಖಾಸಗಿ ಸಂಸ್ಥೆಗಳು ಕಾನೂನಿನ ಮೇಲೆ, ವಿದ್ಯಾರ್ಥಿಗಳ ಮೇಲೆ ತಮ್ಮ ಆಲೋಚನೆ, ಸಿದ್ಧಾಂತನವನ್ನು ಹೇರಿಕೆ ಮಾಡಲು ಸರಕಾರವೇ ಆಸ್ಪದ ಮಾಡಿಕೊಡುತ್ತಿದೆ ಎಂದು ಅವರು ಆಪಾಧಿಸಿದ್ದಾರೆ.
ರಾಜ್ಯದ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡುವುದು ಸರಕಾರದ ಶಾಸನಬದ್ಧವಾದ ಹಕ್ಕಾಗಿದೆ. ಇದನ್ನು ಪಾಲಿಸಲಾಗದ ರಾಜ್ಯ ಸರಕಾರ, ಅದನ್ನು ಖಾಸಗಿವರೆಗೆ ನೀಡುತ್ತಿರುವುದರ ಹಿಂದೆ ಷಡ್ಯಂತ್ರಗಳು ಅಡಗಿದೆ. ಇದರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಹಾಗೂ ಶಿಕ್ಷಕರ ಸಂಘಟನೆಗಳು ಧ್ವನಿ ಎತ್ತಬೇಕಾಗಿದೆ ಎಂದು ಅವರು ಹೇಳಿದ್ದಾರೆ.







