ಚಿಕ್ಕಮಗಳೂರು: ಸೋಮವಾರ ಗ್ರಾಮ ಪಂಚಾಯತ್ ಚುನಾವಣೆ; ಕಣದಲ್ಲಿ 663 ಅಭ್ಯರ್ಥಿಗಳು

ಚಿಕ್ಕಮಗಳೂರು, ಮಾ.28: ಜಿಲ್ಲೆಯಲ್ಲಿ ಅವಧಿ ಮುಗಿದ 14 ಗ್ರಾಪಂ ಹಾಗೂ ವಿವಿಧ ಕಾರಣಗಳಿಂದ ಚುನಾವಣೆ ನಡೆಯದಿದ್ದ 23 ಗ್ರಾಮ ಪಂಚಾಯತ್‍ಗಳ ವಿವಿಧ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಲಿದೆ. ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಚುನಾವಣಾ ಕಣದಲ್ಲಿರುವ 663 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರ ಬರೆಯಲಿದ್ದಾರೆ.
ಸೋಮವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ನಗರದ ಬೇಲೂರು ರಸ್ತೆಯಲ್ಲಿರುವ ಜ್ಯೂನಿಯರ್ ಕಾಲೇಜು ಆವರಣದಿಂದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಪೆಟ್ಟಿಗೆಯೊಂದಿಗೆ ನಿಯೋಜನೆಗೊಂಡ ಮತ ಕೇಂದ್ರಗಳಿಗೆ ತೆರಳಿದರು. ಚುನಾವಣೆ ಪ್ರಕ್ರಿಯೆಗೆ ಬೇಕಾಗುವ ಮತ ಪೆಟ್ಟಿಗೆ, ಬ್ಯಾಲೆಟ್ ಪೇಪರ್, ಮತದಾರರ ಪಟ್ಟಿ ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲಾಖೆಯಿಂದ ನಿಯೋಜಿಸಿದ್ದ ವಾಹನಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು.
ಜಿಲ್ಲಾದ್ಯಂತ ನಡೆಯಲಿರುವ ಅವಧಿ ಮುಗಿದ 14 ಗ್ರಾಪಂ ಹಾಗೂ ವಿವಿಧ ಕಾರಣಗಳಿಂದ ಚುನಾವಣೆ ನಡೆಯದಿದ್ದ 23 ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 146 ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳಲ್ಲಿ 685 ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಅವಧಿ ಮುಗಿದ 14 ಗ್ರಾಮ ಪಂಚಾಯತ್‍ಗಳ 133 ಸ್ಥಾನಗಳು ಹಾಗೂ ವಿವಿಧ ಕಾರಣಗಳಿಂದ ಚುನಾವಣೆ ನಡೆಯದ 23 ಗ್ರಾಮ ಪಂಚಾಯತ್‍ಗಳ 124 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 16 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ 16 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಈ ಸ್ಥಾನಗಳ ಚುನಾವಣೆ ಬಾಕಿ ಉಳಿಯಲಿದೆ.
ಸಾರ್ವತ್ರಿಕ ಚುನಾವಣೆ: ಚಿಕ್ಕಮಗಳೂರು ತಾಲೂಕಿನ 6 ಗ್ರಾಮ ಪಂಚಾಯತ್‍ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, 6 ಗ್ರಾಪಂ ವ್ಯಾಪ್ತಿಯ 55 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 4 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 139 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಡೂರು ತಾಲೂಕಿನ 5 ಗ್ರಾಪಂ ವ್ಯಾಪ್ತಿಯ 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 5 ಸ್ಥಾನಗಳಿಗೆ ಆವಿರೋಧ ಆಯ್ಕೆಯಾಗಿದ್ದು, 149 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೊಪ್ಪ ತಾಲೂಕಿನ 1 ಗ್ರಾಪಂ ವ್ಯಾಪ್ತಿಯ 17 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೂಡಿಗೆರೆ ತಾಲೂಕಿನ 1 ಗ್ರಾಪಂ ವ್ಯಾಪ್ತಿಯ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಪಂ ವ್ಯಾಪ್ತಿಯ 9 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವುದರಿಂದ ಚುನಾವಣೆ ನಡೆಯುತ್ತಿಲ್ಲ.
ಉಪಚುನಾವಣೆ: ಚಿಕ್ಕಮಗಳೂರು ತಾಲೂಕಿನ 9 ಗ್ರಾಮ ಪಂಚಾಯತ್‍ಗೆ ಉಪಚುನಾವಣೆ ನಡೆಯುತ್ತಿದ್ದು, 9 ಗ್ರಾಪಂ ವ್ಯಾಪ್ತಿಯ 70 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 58 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 164 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿವೆ. ಕಡೂರು ತಾಲೂಕಿನ 4 ಗ್ರಾಪಂ ಉಪಚುನಾವಣೆಯಲ್ಲಿ 5 ಸ್ಥಾನಗಳಲ್ಲಿ 1 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, 3ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ, ಕೊಪ್ಪ ತಾಲೂಕಿನ 1 ಗ್ರಾ.ಪಂ. ಉಪಚುನಾವಣೆಯಲ್ಲಿ 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೂಡಿಗೆರೆ ತಾಲೂಕಿನ 5 ಗ್ರಾ.ಪಂ., 33 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 83 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನರಸಿಂಹರಾಜಪುರ ತಾಲೂಕಿನ 4 ಗ್ರಾಪಂ ವ್ಯಾಪ್ತಿಯ 28 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 69 ಅಭ್ಯರ್ಥಿಗಳು ಸ್ಫರ್ಧಾ ಕಣದಲ್ಲಿದ್ದಾರೆ.
ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿರುವುದು: ಚಿಕ್ಕಮಗಳೂರು ತಾಲೂಕಿನ 6 ಗ್ರಾ.ಪಂ. ಸ್ಥಾನಗಳಿಗೆ, ಕಡೂರು ತಾಲೂಕಿನಲ್ಲಿ 1 ಸ್ಥಾನ, ತರೀಕೆರೆ ತಾಲೂಕಿನ 9 ಸ್ಥಾನಗಳು ಸೇರಿದಂತೆ 16 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ.
2020ರ ಡಿಸೆಂಬರ್ ಅಂತ್ಯದಲ್ಲಿ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಗ್ರಾ.ಪಂ. ಚುನಾವಣೆ ಬಹಿಷ್ಕಾರದ ಕೂಗು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. 9 ಗ್ರಾಮ ಪಂಚಾಯತ್‍ಗಳ ಚುನಾವಣೆ ಬಹಿಷ್ಕಾರ ಮಾಡಲಾಗಿತ್ತು. ನಂತರದ ದಿನಗಳಲ್ಲಿ ರಾಜ್ಯ ಸರಕಾರ ಕಸ್ತೂರಿರಂಗನ್ ವರದಿ ಮಾರ್ಪಡಿಗೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಕುರಿತು ಹೇಳಿಕೆ ನೀಡಿದ್ದರಿಂದ ಮಲೆನಾಡು ಭಾಗದಲ್ಲಿ ಅಂದು ಚುನಾವಣೆ ಬಹಿಷ್ಕರಿಸಿದ್ದ ಗ್ರಾಮ ಪಂಚಾಯತ್‍ಗಳಿಗೆ ಸೋಮವಾರ ಚುನಾವಣೆ ನಡೆಯುತ್ತಿದೆ.
ಮತ್ತೆ ಚುನಾವಣೆ ಬಹಿಷ್ಕಾರದ ಕೂಗು: ಜಿಲ್ಲೆಯಲ್ಲಿ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆ ಕೈಬಿಡಬೇಕೆಂದು ಚಿಕ್ಕಮಗಳೂರು ತಾಲೂಕು ಮೇಲಿನಹುಲುವತ್ತಿ ಗ್ರಾಮ ಪಂಚಾಯತ್‍ನ ಚುನಾವಣೆಯನ್ನು ಬಹಿಷ್ಕರಿಸಲಾಗಿದೆ. ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿಯ ಕೆಂಚಿನಕೊಪ್ಪ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ರೈತರ ಜಮೀನು ಪಕ್ಕಾಪೋಡಿ ಮಾಡಬೇಕು. ಇ-ಸ್ವತ್ತು ನೀಡಬೇಕು ಮತ್ತು ಹುಲಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರಿಸಿದ್ದಾರೆ.







