ತಿಂಗಳೊಳಗೆ 10 ಹೊಸ ರಫೇಲ್ ಯುದ್ಧವಿಮಾನ ವಾಯುಪಡೆಗೆ ಸೇರ್ಪಡೆ

ಹೊಸದಿಲ್ಲಿ, ಮಾ.28: ಒಂದು ತಿಂಗಳೊಳಗೆ 10 ಹೊಸ ರಫೇಲ್ ಯುದ್ಧವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ ಎಂದು ಸರಕಾರದ ಮೂಲಗಳು ಹೇಳಿವೆ. ಈಗಾಗಲೇ ಅಂಬಾಲ ವಾಯುನೆಲೆಯ 17ನೇ ತುಕಡಿಯಲ್ಲಿ 11 ರಫೇಲ್ ಯುದ್ಧವಿಮಾನಗಳನ್ನು ನಿಯೋಜಿಸಲಾಗಿದೆ. ಮುಂದಿನ ಮೂರು ದಿನದೊಳಗೆ ಫ್ರಾನ್ಸ್‌ನಿಂದ 3 ರಫೇಲ್ ಯುದ್ಧವಿಮಾನ ಭಾರತಕ್ಕೆ ಆಗಮಿಸಲಿದೆ. ಎಪ್ರಿಲ್ 15ರೊಳಗೆ ಮತ್ತೆ 7 ರಫೇಲ್ ಯುದ್ಧವಿಮಾನ ಭಾರತಕ್ಕೆ ರವಾನೆಯಾಗಲಿದೆ. ಇದರೊಂದಿಗೆ ಭಾರತೀಯ ವಾಯುಪಡೆಗೆ 21 ರಫೇಲ್ ಯುದ್ಧವಿಮಾನ ಸೇರ್ಪಡೆಯಾಗಲಿದ್ದು ನಮ್ಮ ರಕ್ಷಣಾಪಡೆಗಳ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ . ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನ ಖರೀದಿಗೆ 2016ರ ಸೆಪ್ಟಂಬರ್‌ನಲ್ಲಿ ಒಪ್ಪಂದ ಏರ್ಪಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ವಾಯುಪಡೆಗೆ ನಿಯೋಜನೆಗೊಂಡಿದ್ದ ರಫೇಲ್ ಯುದ್ಧವಿಮಾನವನ್ನು ಚೀನಾದೊಂದಿಗಿನ ಗಡಿಬಿಕ್ಕಟ್ಟಿನ ಸಂದರ್ಭ ಪೂರ್ವ ಲಡಾಖ್‌ನಲ್ಲಿ ಗಸ್ತು ಕಾರ್ಯಕ್ಕೆ ಬಳಸಲಾಗಿತ್ತು. ರಫೇಲ್ ವಿಮಾನದ ಜೊತೆಗೆ, ಬಹುವಿಧದ ಕಾರ್ಯನಿರ್ವಹಿಸುವ 114 ಯುದ್ಧವಿಮಾನಗಳನ್ನು ಖರೀದಿಸಲೂ ಭಾರತ ನಿರ್ಧರಿಸಿದೆ ಎಂದು ವಾಯುಪಡೆಯ ಮೂಲಗಳು ಹೇಳಿವೆ.





