ಸುಬ್ರಾಯ ಚೊಕ್ಕಾಡಿ ಆತ್ಮಕತೆಯಲ್ಲಿ ಕರಾವಳಿಯ ಸೊಗಡು, ಉದಾರತೆಯಿದೆ: ಡಾ.ಬಿ.ಎ.ವಿವೇಕ್ ರೈ

ಬೆಂಗಳೂರು, ಮಾ.28: ಸಾಹಿತಿ ಸುಬ್ರಾಯ ಚೊಕ್ಕಾಡಿಯವರ ಆತ್ಮಕತೆಯಲ್ಲಿ ಅವರ ಉದಾರ ವ್ಯಕ್ತಿತ್ವ ಹಾಗೂ ಕರಾವಳಿಯ ಪರಿಸರದ ಸೊಗಡನ್ನು ಕಾಣಬಹುದು. ಜತೆಗೆ ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಸಾಂಸ್ಕೃತಿಕ ಪಠ್ಯವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ್ ರೈ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ವಿಕಾಸ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ 'ಕಾಲದೊಂದೊಂದೇ ಹನಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದಿನಂಪ್ರತಿ ಜೀವನದಲ್ಲಿ ಹೊಸತನದ ಅನುಭವಗಳನ್ನು ಕಾಣುವ ಅಪರೂಪದ ವ್ಯಕ್ತಿತ್ವ ಚೊಕ್ಕಾಡಿಯವರದು. ತಮ್ಮದೆ ಆದ ಸ್ಪಷ್ಟ ನಿಲುವುಗಳನ್ನು ಇಟ್ಟುಕೊಂಡು ಪ್ರತಿಕ್ಷಣದಲ್ಲಿ ಸಮಸ್ಯೆಗಳನ್ನು ದಾಟಿ ಹೇಗೆ ಬದುಕಬೇಕೆಂದು ಚೊಕ್ಕಾಡಿ ತಮ್ಮ ಆತ್ಮಕತೆಯಲ್ಲಿ ಅನಾವರಣಗೊಳಿಸಿದ್ದಾರೆ. ಸಣ್ಣ ಗ್ರಾಮದಿಂದ ಬಂದು ಮಹತ್ತರವಾದುದನ್ನು ಸಾಧಿಸುವ ಬಗೆ ತೆರೆದಿಡುತ್ತಾರೆ ಎಂದು ವಿವರಿಸಿದರು.
ಬದುಕಿನ ಎಲ್ಲ ರಂಗಗಳ ಬಹುತ್ವದ ಅನುಭವವನ್ನು ಚೊಕ್ಕಾಡಿ ಅವರು ತಮ್ಮ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ. ಚೊಕ್ಕಾಡಿಯವರ ನಿರೂಪಣೆಯಲ್ಲಿ ಸೌಜನ್ಯದ ಜೊತೆಗೆ ಸ್ಪಷ್ಟತೆಯಿದೆ. ಭಾಷೆಯ ಅಭಿವ್ಯಕ್ತಿಯಲ್ಲಿ ಪ್ರೀತಿಯಿದೆ. ಅವರ ಉದಾರ ವ್ಯಕ್ತಿತ್ವ ಬದುಕಿನ ಅನುಭವ ಗಾಥೆಯಾಗಿದೆ. ಜೊತೆಗೆ ಕರಾವಳಿಯ ಪರಿಸರವನ್ನೂ ಪರಿಚಯಿಸುವ ಮೂಲಕ ಕೃತಿಯು ಸಾಂಸ್ಕೃತಿಕ ನಕಾಶೆಯನ್ನು ಒದಗಿಸಿದೆ ಎಂದು ತಿಳಿಸಿದರು.
ಚೊಕ್ಕಾಡಿಯವರು ವಿಸ್ಮಯ ಹಾಗೂ ಎಲ್ಲ ಕಾಲಕ್ಕೂ ಸಲ್ಲುವ ವ್ಯಕ್ತಿತ್ವ. ಅವರು ಕೃಷಿಕ, ಸಾಹಿತಿ, ಶಿಕ್ಷಕ ಹಾಗೂ ಹಿರಿಯನಾಗಿ ಆಕರ್ಷಕ ವೃತ್ತಗಳನ್ನು ನಿರ್ವಹಿಸುತ್ತಾರೆ. ಅವರು ನೋವು, ಸಮಸ್ಯೆ, ಸವಾಲುಗಳನ್ನು ಎದುರಿಸಿದರೂ ವ್ಯಕ್ತಿತ್ವ ಬಿಟ್ಟುಕೊಡುವುದಿಲ್ಲ. ಸೌಮ್ಯವಾಗಿ ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆ. ಎಲ್ಲಿಯೂ ನುಣುಚಿಕೊಳ್ಳದೆ ಪ್ರಾಮಾಣಿಕವಾಗಿ ಅಭಿವ್ಯಕ್ತಿಸುತ್ತಾರೆ ಎಂದರು.
ಸಾಹಿತಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಅನುಭವದ ಕಥನ ನಿರೂಪಣೆಗೆ ಕೊರೋನ ಕಾಲಘಟ್ಟ ವರವಾಗಿ ಪರಿಣಮಿಸಿತು. ಬಹುದಿನಗಳ ನಂತರ ಅಂಜನಾ ಹೆಗಡೆಯವರ ನೆರವಿನೊಂದಿಗೆ ಹಲವು ಸಮಸ್ಯೆಗಳ ನಡುವೆ ಕೃತಿಯು ರೂಪುಗೊಂಡಿತು ಎಂದು ಕೃತಿ ರಚನೆಯ ಸಂದರ್ಭವನ್ನು ವಿವರಿಸಿದರು.
ವಿಮರ್ಶಕ ಎಸ್.ಆರ್.ವಿಜಯಶಂಕರ್ ಮಾತನಾಡಿ, ಚೊಕ್ಕಾಡಿಯವರ ವ್ಯಕ್ತಿತ್ವ ವಿಶಿಷ್ಟವಾಗಿದ್ದು ಕಾವ್ಯಗಳ ಮೂಲಕ ನವ್ಯ ಸಾಹಿತ್ಯದ ಕಡೆ ವಾಲುವಂತೆ ಮಾಡಿದರು. ಅವರ ಭಾಷೆಯ ಮೇಲಿನ ವ್ಯಾಮೋಹ, ಪುಸ್ತಕದ ಪ್ರೀತಿ ನನ್ನಲ್ಲಿ ಬರಹದ ಗೀಳು ಮೂಡಿಸಿತು ಎಂದು ಚೊಕ್ಕಾಡಿವರೊಂದಿಗಿನ ಒಡನಾಟ ಸ್ಮರಿಸಿದರು.
ಭಾಷೆಯ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದ ಚೊಕ್ಕಾಡಿ ಕಾಗುಣಿತದಲ್ಲಿ ತಪ್ಪಾಗಬಾರದು ಎನ್ನುತ್ತಿದ್ದರು. ಅವರ ಪ್ರಭಾವದಿಂದ ನನ್ನಲ್ಲಿ ವಿಮರ್ಶಾ ಪ್ರಜ್ಞೆ ಬೆಳೆಯಿತು. ಅವರ ಕೃತಿಯಲ್ಲಿ ಭವದ ಮತ್ತು ಅನುಭಾವದ ಕಲ್ಪನೆ ಕಾಣಬಹುದು ಎಂದರು.
ಪತ್ರಕರ್ತ ಜೋಗಿ ಪುಸ್ತಕದ ಕುರಿತು ಮಾತನಾಡಿದರು. ಲೇಖಕ ಡಾ.ನಾ.ದಾಮೋದರ ಶೆಟ್ಟಿ, ಕೃತಿಯ ನಿರೂಪಕಿ ಅಂಜನಾ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
.jpg)







