ವಿಶ್ವದಾದ್ಯಂತ ಆರ್ಥ್ ಆವರ್ ಆಚರಣೆ
ಕಗ್ಗತ್ತಲಲ್ಲಿ ಮುಳುಗಿದ ವಿಶ್ವಪ್ರಸಿದ್ಧ ಕಟ್ಟಡಗಳು

ಪ್ಯಾರಿಸ್,ಮಾ.28: ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷದಂತೆ ಶನಿವಾರ ‘ಭೂಸಮಯ’ (ಆರ್ತ್ ಆವರ್) ಅನ್ನು ಆಚರಿಸಲಾಯಿತು,
ಪ್ಯಾರಿಸ್ ಐಫೆಲ್ ಟವರ್,ಅಮೆರಿಕದ ಎಂಪೈರ್ ಸ್ಟೇಟ್ ಕಟ್ಟಡ, ಲಂಡನ್‌ನ ಸಂಸತ್ ಭವನ ಕಟ್ಟಡ, ರೋಮ್‌ನ ಪುರಾತನ ಕೊಲೋಸಿಯಂ ಭವನ, ಮಾಸ್ಕೊದ ಕ್ರೆಮ್ಲಿನ್ , ಸಿಡ್ನಿಯ ಅಪೇರಾ ಹೌಸ್ ಸೇರಿದಂತೆ ವಿಶ್ವಪ್ರಸಿದ್ಧ ಕಟ್ಟಡಗಳಲ್ಲಿ ಶನಿವಾರ ರಾತ್ರಿ ಸ್ಥಳೀಯ ಕಾಲಮಾನ 8:30ರಿಂದ 9:30ರವರೆಗೆ ವಿದ್ಯುತ್ ದೀಪಗಳನ್ನು ಆರಿಸಲಾಯಿತು.ಸಿಂಗಾಪುರದ ಹಲವಾರು ಗಗನಚುಂಬಿ ಕಟ್ಟಡಗಳು ಹಾಗೂ ಪಾರ್ಕ್‌ಗಳು ಕೂಡಾ ಅಂಧಕಾರದಲ್ಲಿ ಮುಳುಗಿದವು. ಹಾಂಕಾಂಗ್,ಥೈಲ್ಯಾಂಡ್‌ನ ಬ್ಯಾಂಕಾಕ್ ನಗರದಲ್ಲಿ ಶಾಪಿಂಗ್ ಮಾಲ್‌ಗಳಲ್ಲಿ ದೀಪಗಳನ್ನು ಆರಿಸುವ ಮೂಲಕ ಆರ್ಥ್ ಆವರ್ ಆಚರಿಸಲಾಯಿತು.
ಈ ವರ್ಷದ ಆರ್ತ್ ಆವರ್ ಕಾರ್ಯಕ್ರಮದಲ್ಲಿ ಪ್ರಕೃತಿ ನಾಶ ಹಾಗೂ ಕೋವಿಡ್-19ನಂತಹ ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೂ ಪರಸ್ಪರ ನಂಟಿರುವ ಬಗ್ಗೆ ಬೆಳಕು ಚೆಲ್ಲುವ ಉದ್ದೇಶವನ್ನು ತಾವು ಹೊಂದಿರುವುದಾಗಿ ಸಂಘಟಕರು ತಿಳಿಸಿದ್ದಾರೆ.





