ಮುಂಬೈ: ಕನ್ನಡ ಕಲಾ ಕೇಂದ್ರದಿಂದ ವಿಶ್ವ ರಂಗಭೂಮಿ ದಿನಾಚರಣೆ

ಮುಂಬೈ, ಮಾ.28: ನಾಟಕ ರಂಗದಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವ ನಾಟಕ ನಿರ್ದೇಶಕ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ಕಂಠದಾನ, ರಂಗ ಕಲಾವಿದ ಜಯಶೀಲ ಸುವರ್ಣ ಹೇಳಿದ್ದಾರೆ.
ಕನ್ನಡ ಕಲಾ ಕೇಂದ್ರದ ವತಿಯಿಂದ ಮಿನಿ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ರಂಗಾನುಭವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಇಂದು ಪ್ರೇಕ್ಷಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ನಾಟಕಗಳನ್ನು ಮನೆಯಲ್ಲೇ ಕುಳಿತು ನೋಡಬಲ್ಲ. ಇದು ನಾಟಕ ನಿರ್ದೇಶಕರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಪ್ರೇಕ್ಷಕರನ್ನು ರಂಗ ಮಂದಿರದತ್ತ ಸೆಳೆಯುವಂತಹ ನಾಟಕಗಳನ್ನು ತೆರೆಮೇಲೆ ತರಲು ಇನ್ನಷ್ಟು ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ.ಆರ್., ರಂಗಭೂಮಿಗೆ ಸೀಮಿತವಾಗಿರುವ ಕನ್ನಡ ಕಲಾ ಕೇಂದ್ರ ಪ್ರಥಮ ಬಾರಿ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಿದೆ. ಇಂತಹ ಕಾರ್ಯಕ್ರಮಗಳು ಕಲಾವಿದರು ಪರಸ್ಪರ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿ ಎಂದರು.
ಕನ್ನಡ ಕಲಾ ಕೇಂದ್ರವು ಮುಂಬೈ ಕಲಾ ನಿರ್ದೇಶಕರಿಂದಲೇ ಮುಂಬೈ ಕಲಾ ಸಂಘಟನೆಗಳ ಸಹಕಾರದಲ್ಲಿ ಕನಿಷ್ಠ ಐದು ನಾಟಕಗಳನ್ನೊಳಗೊಂಡ ನಾಟಕೋತ್ಸವ ಆಯೋಜಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ರಂಗಾನುಭವದಲ್ಲಿ ಅತಿಥಿಗಳಾಗಿದ್ದ ನಾರಾಯಣ ಶೆಟ್ಟಿ ನಂದಳಿಕೆ, ಡಾ.ಜಿ.ಪಿ.ಕುಸುಮಾ, ನವೀನ್ ಶೆಟ್ಟಿ, ಇನ್ನ ಬಾಳಿಕೆ, ಗೀತಾ ಎಲ್. ಭಟ್, ಗೋಪಾಲ್ ತ್ರಾಸಿ ಹಾಗೂ ಜಗದೀಶ್ ಡಿ. ರೈ ತಮ್ಮ ರಂಗ ಬದುಕಿನಲ್ಲಿ ಅನುಭವಗಳನ್ನು ಹಂಚಿಕೊಂಡರು.
ಬಳಿಕ ಡಾ.ಚಂದ್ರಶೇಖರ ಕಂಬಾರ ಅವರ ‘ಮಹಾಮಾಯಿ’ ನಾಟಕದ ದೃಶ್ಯವೊಂದನ್ನು ಗಣೇಶ್ ಕುಮಾರ್ ಹಾಗೂ ಸಾ. ದಯಾ ವಾಚಿಸಿದರು. ಕೇಂದ್ರದ ಗೌರವ ಪ್ರಧಾನ ಕಾರ್ಯದರ್ಶಿ, ಯಕ್ಷಗಾನ ಕಲಾವಿದ ರಮೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸದಸ್ಯ ಭೀಮರಾಯ ಚಿಲ್ಕ ಸಹಕರಿಸಿದರು.







