ಕೃಷಿ ಕಾಯ್ದೆಗಳ ಪ್ರತಿ ದಹಿಸುವ ಮೂಲಕ ರೈತರಿಂದ ‘ಹೋಳಿ ದಹನ’ ಆಚರಣೆ

ಹೊಸದಿಲ್ಲಿ, ಮಾ. 29: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೃಷಿ ಕಾಯ್ದೆಗಳ ಪ್ರತಿಗಳನ್ನು ದಹಿಸುವ ಮೂಲಕ ‘ಹೋಳಿ ದಹನ’ ಆಚರಿಸಿದರು.
ಪ್ರತಿಭಟನೆ ನಡೆಸುತ್ತಿರುವ ರೈತರು ಗಡಿಯಲ್ಲೇ ಹೋಳಿ ಆಚರಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೆ ತರುವ ವರೆಗೆ ತಮ್ಮ ಚಳವಳಿ ಮುಂದುವರಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಹೇಳಿಕೆ ತಿಳಿಸಿದೆ. ಎಪ್ರಿಲ್ 15ನ್ನು ‘ಭಾರತ ಆಹಾರ ನಿಗಮ ಬಚಾವೊ ದಿವಸ್’ ಆಗಿ ಆಚರಿಸಲಾಗುವುದು. ದೇಶಾದ್ಯಂತ ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಭಾರತ ಆಹಾರ ನಿಗಮಕ್ಕೆ ಘೇರಾವ್ ಹಾಕಲಾಗುವುದು ಎಂದು ಅದು ಹೇಳಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಯನ್ನು ಅಂತ್ಯಗೊಳಿಸಲು ಕೇಂದ್ರ ಸರಕಾರ ಹಲವು ಬಾರಿ ಪರೋಕ್ಷವಾಗಿ ಪ್ರಯತ್ನಿಸಿದೆ. ಕಳೆದ ಕೆಲವು ದಿನಗಳಿಂದ ಎಫ್‌ಸಿಐಯ ಬಜೆಟ್ ಅನ್ನು ಇಳಿಕೆ ಮಾಡಿದೆ. ಇತ್ತೀಚೆಗೆ ಎಫ್‌ಸಿಐ ಕೂಡ ಬೆಳೆ ಖರೀದಿಯ ನಿಯಮವನ್ನು ಬದಲಾಯಿಸಿದೆ ಎಂದ ಹೇಳಿಕೆ ತಿಳಿಸಿದೆ.
ಸಾರ್ವಜನಿಕ ಸೊತ್ತಿಗೆ ಹಾನಿ ಉಂಟಾದಾಗ ದಂಡ ಪಾವತಿಸುವ ಮಸೂದೆಯ ಅಂಗೀಕಾರವನ್ನು ಖಂಡಿಸಿರುವ ಸಂಯುಕ್ತ ಕಿಸಾನ್ ಮುಕ್ತಿ ಮೋರ್ಚಾ, ಈ ಮಸೂದೆ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ ಎಂದಿದೆ. ಖಂಡಿತವಾಗಿಯೂ ಪ್ರಜಾಪ್ರಭುತ್ವಕ್ಕೆ ಮಾರಕವೆಂದು ಸಾಬೀತುಪಡಿಸುವ ಅಪಾಯಕಾರಿ ನಿಯಮಗಳನ್ನು ಈ ಕಾಯ್ದೆ ಹೊಂದಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.







