ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ನಡೆಸಿ: ಸಿಎಂಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ

ಬೆಂಗಳೂರು, ಮಾ. 29: ಹಿಂದಿನ ವರ್ಷ ಎಸೆಸೆಲ್ಸಿ ಪರೀಕ್ಷೆಗೆ ಅನುಸರಿಸಿದ ಕ್ರಮಗಳನ್ನೇ ಅನುಸರಿಸಿ ಸುರಕ್ಷತಾ ಕ್ರಮಗಳೊಂದಿಗೆ 6ರಿಂದ 9ನೆ ತರಗತಿ ಪರೀಕ್ಷೆಗಳನ್ನು ಮುಗಿಸಿ ಅನಂತರ ಮಕ್ಕಳಿಗೆ ರಜೆ ನೀಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ವರ್ಷದ ಪರೀಕ್ಷೆ ಪೂರೈಸುವ ಬಗ್ಗೆ ಈಗಾಗಲೇ ಕಳೆದ ವರ್ಷವೂ ಪರೀಕ್ಷೆ ಇಲ್ಲದೆ ಮಕ್ಕಳನ್ನು ತೇರ್ಗಡೆ ಮಾಡಲಾಗಿದ್ದು, ಈ ವರ್ಷವೂ ಹಾಗೇ ಮಾಡಿದರೆ ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಆರ್‍ಟಿಇ ಕಾಯ್ದೆ 2009ರ ಅನ್ವಯ ಮಕ್ಕಳ ಹಕ್ಕು ಉಲ್ಲಂಘನೆಯಾಗಲಿದೆ. ಇದೀಗ ಆರರಿಂದ 9ನೆ ತರಗತಿ ಮಕ್ಕಳಿಗೆ ಶಾಲೆ ಪ್ರಾರಂಭವಾಗಿ ಆನ್‍ಲೈನ್-ಆಫ್‍ಲೈನ್ ಪಾಠಗಳು ಮುಗಿದಿದ್ದು, ಪರೀಕ್ಷೆ ಸಂದರ್ಭದಲ್ಲಿ ಇದೀಗ ಪರೀಕ್ಷೆ ಇಲ್ಲದೆ ಈ ಬಾರಿಯೂ ತೇರ್ಗಡೆ ಮಾಡುವುದಾದರೆ ಇದರಿಂದ ಮಕ್ಕಳ ಮೇಲೆ ಅತ್ಯಂತ ಅನ್ಯಾಯ ಎಸಗಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಮಕ್ಕಳ ಮೇಲೆ ಕೋವಿಡ್ ಪರಿಣಾಮ ಆಗದೆ ಇರುವುದರಿಂದ ಪರೀಕ್ಷೆ ಸಂದರ್ಭವನ್ನು ಪರಿಗಣಿಸಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆಗಳನ್ನು ನಡೆಸಬೇಕು. ಇದರಿಂದ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಕಲಿತಂತಹ ಮಕ್ಕಳಿಗೆ ಸಾಮಾನ್ಯ ನ್ಯಾಯ ಒದಗಿಸಿದಂತೆ ಆಗುತ್ತದೆ ಎಂದು ಹೊರಟ್ಟಿ ತಿಳಿಸಿದ್ದಾರೆ.







