ಮಗುವಿನ ಸಾವಿಗೆ ಎತ್ತಿನಹೊಳೆ ಯೋಜನೆ ಪೈಪ್‍ಲೈನ್ ಕಾಮಗಾರಿ ಕಾರಣ: ಸತ್ಯಶೋಧನಾ ಸಮಿತಿ
ಹೂತಿದ್ದ ಮಗುವಿನ ಮೃತದೇಹ ಹೊರ ತೆಗೆದ ಪ್ರಕರಣ
ಬೆಂಗಳೂರು, ಮಾ. 29: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಜಂಪನಹಳ್ಳಿ ಕ್ರಾಸ್ ಕೈಮರ ಗ್ರಾಮದಲ್ಲಿ ಮಾ.18ರಂದು ಸಂಭವಿಸಿದ್ದ ದಲಿತ ಮಗುವಿನ ಸಾವು ಮತ್ತು ಹೂತಿದ್ದ ಶವವನ್ನು ಹೊರತೆಗಿಸಿದ ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡದೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಕೂಡಲೇ ಪರಿಹಾರ ವಿತರಿಸಬೇಕು ಎಂದು ಸತ್ಯಶೋಧನಾ ಸಮಿತಿ ಆಗ್ರಹಿಸಿದೆ.
ಮಾ.27ಕ್ಕೆ ನ್ಯಾಷನಲ್ ಕಾನ್ಫಿಡೆರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ ನ ಮಲ್ಲೇಶ್, ಗಣೇಶ್, ಐಶ್ವರ್ಯ, ಮೋಹನ್, ರವಿ ಹಾಗೂ ಉಮ್ಮರ್ ಫಾರೂಕ್ ಚನ್ನರಾಯಪಟ್ಟಣ ಸೇರಿದಂತೆ ಆರು ಜನರ ತಂಡ ಖುದ್ದು ಸ್ಥಳ ಪರಿಶೀಲನೆ ನಡೆಸಿದೆ. ಅಲ್ಲಿ ವಾಸವಿರುವ ಸಮುದಾಯದ ಕೆಲವರಿಗೆ ಚನ್ನದಾಸ ಮತ್ತು ಕೆಲವರಿಗೆ ಮಲದಾಸ ಜಾತಿ ಪ್ರಮಾಣಪತ್ರ ನೀಡಿದ್ದು ಅಲ್ಲಿರುವ ಒಂದೇ ಜಾತಿಯವರಲ್ಲಿ ಗೊಂದಲ ಸೃಷ್ಟಿಸಿದ ಅಧಿಕಾರಿ ವರ್ಗದವರು ಇದನ್ನು ಕೂಡಲೇ ಸರಿಪಡಿಸಿ ಪ್ರಕರಣಕ್ಕೆ ಕಾರಣನಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.
ಜಂಪನಹಳ್ಳಿ ಕ್ರಾಸ್ ಕೈಮರ ಗ್ರಾಮದಲ್ಲಿ ಮೂರು ತಿಂಗಳ ಮಗುವಿನ ಶವಸಂಸ್ಕಾರಕ್ಕೆ ತಡೆಯೊಡ್ಡಿದ್ದಲ್ಲದೆ ಹೂತಿದ್ದ ಶವವನ್ನು ಹೊರತೆಗಿಸಿದ್ದು ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ದಲಿತ ಕುಟುಂಬದ ಮಗುವಿನ ಸಾವಿಗೆ ಪಕ್ಕದಲ್ಲೇ ನಡೆಯುತ್ತಿರುವ ಎತ್ತಿನಹೊಳೆಯ ಪೈಪ್‍ಲೈನ್ ಕಾಮಗಾರಿ ಸ್ಫೋಟವೇ ಮೂಲ ಕಾರಣವಾಗಿದೆ ಎಂದು ಸತ್ಯಶೋಧನಾ ಸಮಿತಿ ಆರೋಪಿಸಿದೆ.
ಎತ್ತಿನಹೊಳೆ ಯೋಜನೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿರುವ ಸಮಯದಲ್ಲಿ ಸ್ಪೋಟಿಸುವ ಸಂದರ್ಭ ಬಂದರೆ ಸೂಕ್ತ ಮುನ್ನಚ್ಚರಿಕೆ ಮತ್ತು ನಿಯಮಾವಳಿಗಳನ್ನು ಅನುಸರಿಸಿ ಸ್ಫೋಟಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ದಲಿತ ಸಂಘಟನೆಗಳ ಬಹುದಿನದ ಬೇಡಿಕೆಯಾದ ಪ್ರತಿ ಊರಿಗೊಂದು ದಲಿತರಿಗೆ ಪ್ರತ್ಯೇಕ ಸ್ಮಶಾನವನ್ನು ಕಾಯ್ದಿರಿಸಬೇಕು ಎಂದು ಸಮಿತಿ ಆಗ್ರಹಿಸಿದೆ.







