76 ಮಂದಿಗೆ ಕೊರೋನ ಸೋಂಕು: ಹೃಷಿಕೇಶ್‌ನ ತಾಜ್ ಹೊಟೇಲ್ 3 ದಿನ ಬಂದ್
ಹೊಸದಿಲ್ಲಿ, ಮಾ. 29: ಎಪ್ಪತ್ತಾರು ಮಂದಿಗೆ ಕೊರೋನ ಸೋಂಕು ತಗುಲಿದ ಬಳಿಕ ಉತ್ತರಾಖಂಡ ಹೃಷಿಕೇಶ್‌ನ ತಾಜ್ ಹೃಷಿಕೇಶ್ ರಿಸೋರ್ಟ್ ಹಾಗೂ ಸ್ಪಾವನ್ನು 3 ದಿನಗಳ ಕಾಲ ಮುಚ್ಚಲಾಗಿದೆ. ‘‘76 ಮಂದಿ ಕೊರೋನ ಸೋಂಕಿಗೆ ಒಳಗಾದ ಬಳಿಕ ಜಿಲ್ಲಾಡಳಿತ ಹೃಷಿಕೇಶದಲ್ಲಿರುವ ಹೊಟೇಲ್ ತಾಜ್ ಹೃಷಿಕೇಶ್ ಅನ್ನು ಮುಚ್ಚಲಾಗಿದೆ.
ಹೊಟೇಲ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಲಾಗಿದೆ’’ ಎಂದು ತೆಹ್ರಿ ಗರ್ವಾಲ್ ಎಸ್‌ಎಸ್‌ಪಿ ತ್ರಿಪಾಠಿ ಭಟ್ ಸೋಮವಾರ ಹೇಳಿದ್ದಾರೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ಕುಂಭ ಮೇಳಕ್ಕೆ ಹರಿದ್ವಾರದಲ್ಲಿ ಸಿದ್ಧತೆ ನಡೆಯುತ್ತಿರುವ ಸಂದರ್ಭ ಇಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ಇದು ರಾಜ್ಯ ಸರಕಾರದ ಆತಂಕಕ್ಕೆ ಕಾರಣವಾಗಿದೆ.
ಕುಂಭ ಮೇಳಕ್ಕೆ ಆಗಮಿಸುವ ಭಕ್ತರು 72 ಗಂಟೆಯ ಒಳಗಿನ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿ ಅಥವಾ ಕೊರೋನಾ ವೈರಸ್ ಲಸಿಕೆ ಪಡೆದ ಪ್ರಮಾಣ ಪತ್ರ ತರುವುದನ್ನು ಉತ್ತರಾಖಂಡ ಆಡಳಿತ ಕಡ್ಡಾಯಗೊಳಿಸಿದೆ. ಕುಂಭ ಮೇಳೆ ಎಪ್ರಿಲ್ 1ರಿಂದ ಆರಂಭಗೊಳ್ಳಲಿದೆ.





