ಅಪಘಾತ ಮಾಹಿತಿ 48 ಗಂಟೆಗಳಲ್ಲಿ ನ್ಯಾಯಾಧಿಕರಣ, ವಿಮಾ ಕಂಪನಿಗಳಿಗೆ ತಲುಪಬೇಕು: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಮಾ.29: ಪರಿಹಾರ ಕೋರಿಕೆ ಅರ್ಜಿಗಳ ಸಂಸ್ಕರಣೆಗಾಗಿ ಅಪಘಾತ ಮಾಹಿತಿ ವರದಿಗಳನ್ನು ಅಪಘಾತ ಸಂಭವಿಸಿದ 48 ಗಂಟೆಗಳಲ್ಲಿ ಇ-ಮೇಲ್ ಅಥವಾ ಅದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್ ಮೂಲಕ ಮೋಟರ್ ಅಪಘಾತ ಪರಿಹಾರ ಕೋರಿಕೆ ನ್ಯಾಯಾಧಿಕರಣಗಳಿಗೆ ಮತ್ತು ವಿಮಾ ಕಂಪನಿಗಳಿಗೆ ಕಳುಹಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎಲ್ಲ ಪೊಲೀಸ್ ಠಾಣೆಗಳಿಗೆ ಆದೇಶಿಸಿದೆ. ಇದು ಅಪಘಾತ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವನ್ನು ತಡೆಯಲು ನ್ಯಾಯಾಲಯವು ಹೊರಡಿಸಿರುವ ಎಂಟು ನಿರ್ದೇಶಗಳಲ್ಲಿ ಸೇರಿದೆ. ಈ ನಿರ್ದೇಶಗಳು ದೇಶಾದ್ಯಂತ ಎಲ್ಲ ಪೊಲೀಸ್ ಠಾಣೆಗಳು,ಮೋಟರ್ ಅಪಘಾತ ಪರಿಹಾರ ಕೋರಿಕೆ ನ್ಯಾಯಾಧಿಕರಣಗಳು ಮತ್ತು ವಿಮಾ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.
ಅಪಘಾತ ವರದಿಗಳು,ಪರಿಹಾರ ಹಕ್ಕು ಕೋರಿಕೆಗಳು ಮತ್ತು ಇಂತಹ ಕೋರಿಕೆಗಳಿಗೆ ಉತ್ತರಗಳು ಇತ್ಯಾದಿಗಳ ಸಲ್ಲಿಕೆಗೆ ದೇಶಾದ್ಯಂತ ಕಾರ್ಯಾಚರಿಸುವ ಮತ್ತು ಲಭ್ಯವಾಗುವ ರಾಷ್ಟ್ರೀಯ ಆನ್‌ಲೈನ್ ವೇದಿಕೆಯನ್ನು ಆರಂಭಿಸುವಂತೆ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಆರ್.ಸುಭಾಷ್ ರೆಡ್ಡಿ ಅವರ ಪೀಠವು ಕೇಂದ್ರಕ್ಕೆ ಆದೇಶಿಸಿದೆ. ಇದು ತವರು ರಾಜ್ಯಗಳಿಂದ ಹೊರಗೆ ಅಪಘಾತಗಳು ಸಂಭವಿಸಿದಾಗ ಸಂತ್ರಸ್ತರು ಪಡುವ ಬವಣೆಗಳಿಗೆ ಅಂತ್ಯ ಹಾಡುತ್ತದೆ.
ವಕೀಲರಾದ ನರಸಿಂಹ ವಿಜಯರಾಘವನ್ ಮತ್ತು ವಿಪಿನ್ ನಾಯರ್ ಅವರ ಸಲಹೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಇತ್ತೀಚಿನ ಈ ನಿರ್ದೇಶಗಳು ಹೊರಬಿದ್ದಿವೆ. ಈ ಉದ್ದೇಶದಿಂದ ತಮಿಳುನಾಡು ಮತ್ತು ದಿಲ್ಲಿಯಲ್ಲಿ ಈಗಾಗಲೇ ಸ್ವತಂತ್ರ ಆನ್‌ಲೈನ್ ವೇದಿಕೆಗಳು ಕಾರ್ಯಾಚರಿಸುತ್ತಿವೆ ಎನ್ನುವದನ್ನು ಅವರು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಸರಕಾರವು ಈ ಬಗ್ಗೆ ಚರ್ಚಿಸಿ,ರಾಷ್ಟ್ರೀಯ ಆನ್‌ಲೈನ್ ವೇದಿಕೆಯ ಆರಂಭಕ್ಕೆ ಅಂತಿಮ ಗಡುವಿನ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಜಯಂತ ಸೂದ್ ತಿಳಿಸಿದ ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿತು.







