ಭಾರತದಲ್ಲಿ 68 ಸಾವಿರಕ್ಕೂ ಹೆಚ್ಚು ಹೊಸ ಕೊರೋನ ಸೋಂಕು ಪ್ರಕರಣ ದಾಖಲು

ಹೊಸದಿಲ್ಲಿ, ಮಾ.29: ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಭಾರತದಲ್ಲಿ ಕೊರೋನ ಸೋಂಕಿನ 68,020 ಹೊಸ ಪ್ರಕರಣ ದಾಖಲಾಗಿದ್ದು ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 1,20,39,644ಕ್ಕೇರಿದೆ. ಈ ವರ್ಷ ಒಂದು ದಿನದಲ್ಲಿ ದಾಖಲಾಗಿರುವ ಅತ್ಯಧಿಕ ಪ್ರಮಾಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ದೇಶದಲ್ಲಿ ಸತತ 19ನೇ ದಿನವೂ ಸೋಂಕು ಪ್ರಕರಣದಲ್ಲಿ ಹೆಚ್ಚಳವಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 5,21,808ಕ್ಕೇರಿದ್ದರೆ ಚೇತರಿಕೆಯ ಪ್ರಮಾಣ 94.32%ಕ್ಕೆ ಇಳಿದಿದೆ . ಕಳೆದ 24 ಗಂಟೆಯ ಅವಧಿಯಲ್ಲಿ ಸೋಂಕಿನಿಂದಾಗಿ 291 ಜನ ಮೃತಪಟ್ಟಿದ್ದು ಮೃತರಾದವರ ಒಟ್ಟು ಸಂಖ್ಯೆ 1,61,843ಕ್ಕೇರಿದೆ. ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ತಮಿಳುನಾಡಿನಲ್ಲಿ ದೈನಂದಿನ ಸೋಂಕು ಪ್ರಕರಣ ಏರುಗತಿಯಲ್ಲೇ ಮುಂದುವರಿದಿದೆ ಎಂದು ಇಲಾಖೆ ವರದಿ ಮಾಡಿದೆ.
ಕಳೆದ ವರ್ಷದ ಸೆಪ್ಟಂಬರ್ 16ರಂದು 93,617 ಹೊಸ ಪ್ರಕರಣ ದಾಖಲಾಗಿರುವುದು ಇದುವರೆಗಿನ ದಾಖಲೆಯಾಗಿದ್ದರೆ, ಕಳೆದ ವರ್ಷದ ಸೆಪ್ಟಂಬರ್ 15ರಂದು ಒಂದೇ ದಿನದಲ್ಲಿ 1,169 ಸಾವಿನ ಪ್ರಕರಣ ದಾಖಲಾಗಿರುವುದು ಇದುವರೆಗಿನ ದಾಖಲೆಯಾಗಿದೆ. ರವಿವಾರ 9,13,310 ಸ್ಯಾಂಪಲ್‌ಗಳನ್ನು ಪರೀಕ್ಷೆ ನಡೆಸಲಾಗಿದ್ದು ಇದರೊಂದಿಗೆ ಮಾರ್ಚ್ 28ರವರೆಗೆ 24,18,64,161 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಕೊರೋನ ಸೋಂಕು ನಿಯಂತ್ರಿಸಲು ಸೂಚಿಸಿರುವ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ದೇಶದಲ್ಲಿ ಕೊರೋನ ಸೋಂಕಿನ ವಿರುದ್ಧದ ಲಸಿಕೆ ನೀಡುವ ಅಭಿಯಾನಕ್ಕೆ ಜನವರಿ 16ರಂದು ಚಾಲನೆ ದೊರೆತ ಬಳಿಕ ಇದುವರೆಗೆ 6.05 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಕೊರೋನ ಸೋಂಕಿತರ ಪ್ರಮಾಣ ಅಧಿಕವಿರುವ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. ಅಮೆರಿಕ, ಫ್ರಾನ್ಸ್, ಬ್ರೆಜಿಲ್, ಬೆಲ್ಜಿಯಂ ಮತ್ತು ಇಟಲಿ ಕ್ರಮವಾಗಿ 1ರಿಂದ 5ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.