ರಾಜ್ಯದಲ್ಲಿ ಮತ್ತೆ ಎಲ್ ಡಿಎಫ್ ಗೆ ಆಡಳಿತ ಖಚಿತ : ಕೇರಳ ಸಿಎಂ ಪಿಣರಾಯಿ ವಿಜಯನ್
'ಪೌರತ್ವ ಕಾಯ್ದೆ ತಿದ್ದುಪಡಿ ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ'

ಕಾಸರಗೋಡು : ರಾಜ್ಯದಲ್ಲಿ ಮತ್ತೆ ಎಲ್ ಡಿಎಫ್ ಗೆ ಆಡಳಿತ ಖಚಿತ. ಕಳೆದ ಐದು ವರ್ಷಗಳಲ್ಲಿ ಜಾರಿಗೆ ತಂದ ಜನಪರ ಯೋಜನೆ ಹಾಗೂ ಅಭಿವೃದ್ದಿ ಯೋಜನೆಗಳು ಜನರಿಂದ ಮೆಚ್ಚುಗೆ ಪಡೆದಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.
ಕಾಸರಗೋಡು ಸಿಟಿ ಟವರ್ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ಕೇರಳ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಪಡೆದಿದೆ. ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ, ಕೋವಿಡ್ ಸೋಂಕು ಸಂದರ್ಭದಲ್ಲೂ ಕೇರಳದಲ್ಲಿ ಜನರ ಸಮಸ್ಯೆಗೆ ಸರಕಾರ ಸ್ಪಂದಿಸಿದೆ ಆದರೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷ ಮುಂದಾಗುತ್ತಿಲ್ಲ. 5 ವರ್ಷಗಳ ಹಿಂದಿನ ಕೇರಳ ಹಾಗು ಈಗಿನ ಕೇರಳವನ್ನು ಹೋಲಿಕೆ ಮಾಡಬೇಕು. ಅಭಿವೃದ್ಧಿಯನ್ನು ಮುಚ್ಚಿ ಹಾಕಲು ಪ್ರತಿಪಕ್ಷದಿಂದ ಯತ್ನ ನಡೆಯುತ್ತಿದ್ದು, ವಿವಾದಗಳ ಹಿಂದೆ ಪ್ರತಿಪಕ್ಷ ಸುತ್ತು ಹಾಕುತ್ತಿವೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಜನರನ್ನು ವಿಂಗಡಿಸಲು ಪ್ರಯತ್ನಿಸುತ್ತಿದೆ ಮತ್ತು ಅದು ಆರೆಸ್ಸೆಸ್ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನಿರ್ಭಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಹೇಳಿದರು.
ಅಲ್ಪ ಸಂಖ್ಯಾತರು, ಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾತಾಂತರ ನೆಪದಲ್ಲಿ ಸಂಘಪರಿವಾರ ನಡೆಸುವ ಇಂತಹ ಕೃತ್ಯವನ್ನು ಖಂಡಿಸುವುದಾಗಿ ಅವರು ಹೇಳಿದರು.







