ಮೃತಪಟ್ಟ ಅಜ್ಜಿಯ ಸರಳ ಜೀವನವನ್ನು ಸ್ಮರಿಸಿದ ಬರಾಕ್ ಒಬಾಮ: ಪೋಸ್ಟ್ ವ್ಯಾಪಕ ವೈರಲ್
"ನಾನು ಅಮೆರಿಕಾ ಅಧ್ಯಕ್ಷನಾದಾಗಲೂ ಅಜ್ಜಿ ಕಷ್ಟಪಟ್ಟು ದುಡಿಯುತ್ತಿದ್ದರು"

Photo: facebook.com/barackobama
ವಾಷಿಂಗ್ಟನ್: ಇತ್ತೀಚೆಗೆ ತಮ್ಮ ಅಜ್ಜಿಯನ್ನು ಕಳೆದುಕೊಂಡ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ತಮ್ಮ ಅಜ್ಜಿಯನ್ನು ಸ್ಮರಿಸಿ ಮಾಡಿರುವ ಫೇಸ್ ಬುಕ್ ಪೋಸ್ಟ್ ವ್ಯಾಪಕ ವೈರಲ್ ಆಗಿದೆ.
"ನಾನು ಮತ್ತು ನನ್ನ ಕುಟುಂಬ ನನ್ನ ಅಚ್ಚುಮೆಚ್ಚಿನ ಅಜ್ಜಿ ಸಾರಾ ಒಗ್ವೇ ಒನಿಯಾಂಗೊ ಒಬಾಮ ಅವರನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ. ಮಾಮಾ ಸಾರಾ ಎಂದು ಎಲ್ಲರೂ ಪ್ರೀತಿಯಿಂದ ಆಕೆಯನ್ನು ಕರೆಯುತ್ತಿದ್ದರೆ ನಮಗೆ ಆಕೆ ʼಡಾನಿ' ಅಥವಾ ಗ್ರ್ಯಾನಿ ಆಗಿದ್ದರು. ಕಳೆದ ಶತಮಾನದ ಮೊದಲ ತ್ರೈಮಾಸಿಕದಲ್ಲಿ ವಿಕ್ಟೋರಿಯಾ ಸರೋವರದ ತೀರದ ನ್ಯಾನ್ಝ ಪ್ರಾಂತ್ಯದಲ್ಲಿ ಜನಿಸಿದ್ದ ಆಕೆ ಯಾವುದೇ ಔಪಚಾರಿಕ ಶಿಕ್ಷಣ ಪಡೆದಿಲ್ಲ.
ಆಗಿನ ಪದ್ಧತಿಯಂತೆ ಆಕೆ ಹದಿಹರೆಯದವರಿರುವಾಗಲೇ ಬಹಳಷ್ಟು ಹಿರಿಯ ವ್ಯಕ್ತಿಯ ಜತೆಗೆ ವಿವಾಹವಾಯಿತು. ಆಕೆ ತನ್ನ ಮುಂದಿನ ಜೀವನವನ್ನು ಅಲೆಗೋ ಎಂಬ ಪುಟ್ಟ ಹಳ್ಳಿಯಲ್ಲಿ ಮಣ್ಣು ಹಾಗೂ ಇಟ್ಟಿಗೆಗಳಿಂದ ನಿರ್ಮಿಸಿದ ಹಾಗೂ ವಿದ್ಯುತ್ ಸೌಲಭ್ಯ ಇಲ್ಲದ ಮನೆಯಲ್ಲಿ ಕಳೆದು ಅಲ್ಲಿ ಎಂಟು ಮಕ್ಕಳಿಗೆ ಜನ್ಮ ನೀಡಿ ಬೆಳೆಸಿದ್ದರು. ಆಡು, ಕೋಳಿಗಳನ್ನು ಸಾಕಿಕೊಂಡು ವಿವಿಧ ಬೆಳೆಗಳನ್ನು ಬೆಳೆಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿದ್ದರು" ಎಂದು ಒಬಾಮ ಬರೆದಿದ್ದಾರೆ
"ಆಕೆ ನನ್ನ ತಂದೆಯ ಹೆತ್ತ ತಾಯಿಯಲ್ಲದೇ ಇದ್ದರೂ ಆಕೆ ನನ್ನ ತಂದೆಯನ್ನು ತನ್ನ ಮಗನಂತೆಯೇ ಬೆಳೆಸಿದ್ದರು. ಆಕೆಯ ಪ್ರೋತ್ಸಾಹದಿಂದ ನನ್ನ ತಂದೆ ವಿದ್ಯಾರ್ಥಿವೇತನ ಪಡೆದು ಅಮೆರಿಕಾ ವಿವಿಯಲ್ಲಿ ಶಿಕ್ಷಣ ಪಡೆಯುವಂತಾಯಿತು. ನನ್ನ ಕುಟುಂಬದ ಬಗ್ಗೆ ಹೆಚ್ಚು ತಿಳಿಯಲು ನಾನು ಮೊದಲ ಬಾರಿ ಕೆನ್ಯಾಗೆ ಪ್ರಯಾಣಿಸಿದಾಗ ನನ್ನ ತಂದೆ ಆಗ ಬದುಕಿಲ್ಲದೇ ಇದ್ದರೂ ನನ್ನ ಅಜ್ಜಿಯೇ ನನಗೆ ಹಿಂದಿನ ಕಥೆಗಳನ್ನು ವಿವರಿಸಿದ್ದರು. ಮುಂದೆ ಆಕೆ ತನ್ನ ಮೊಮ್ಮಗ ಅಮೆರಿಕಾದ ಅಧ್ಯಕ್ಷರಾಗುವುದನ್ನು ನೋಡಿದರೂ ಆಕೆ ಯಾವತ್ತೂ ಬದಲಾಗಿರಲಿಲ್ಲ, ಹಿಂದಿನಂತೆಯೇ ಕಷ್ಟಪಟ್ಟು ದುಡಿಯುತ್ತಿದ್ದರು" ಎಂದು ಒಬಾಮ ನೆನಪಿಸಿಕೊಂಡಿದ್ದಾರೆ.
My family and I are mourning the loss of our beloved grandmother, Sarah Ogwel Onyango Obama, affectionately known to...
Posted by Barack Obama on Monday, 29 March 2021