ಮ್ಯಾನ್ಮಾರ್ ಬಂದರು ಯೋಜನೆ ಕುರಿತು ಮಿಲಿಟರಿ ಜತೆ ಯಾವುದೇ ಮಾತುಕತೆ ನಡೆಸಿಲ್ಲ ಎನ್ನುತ್ತಿರುವ ಅದಾನಿ ಸಮೂಹ
ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಫೋಟೊ ಮತ್ತು ವೀಡಿಯೋಗಳು

ಹೊಸದಿಲ್ಲಿ: ಮಾನವ ಹಕ್ಕು ಉಲ್ಲಂಘನೆಗಳಿಗಾಗಿ ಅಮೆರಿಕಾದಿಂದ ನಿರ್ಬಂಧ ಹೇರಲ್ಪಟ್ಟಿರುವ ಮ್ಯಾನ್ಮಾರ್‍ನ ಮಿಲಿಟರಿ ನಿಯಂತ್ರಿತ ಸಂಸ್ಥೆಯೊಂದಕ್ಕೆ ಅದಾನಿ ಸಮೂಹ ಸಂಸ್ಥೆಯು ಯಾಂಗೊನ್ ಎಂಬಲ್ಲಿನ ಪ್ರಸ್ತಾವಿತ ಕಂಟೇನರ್ ಬಂದರು ಯೋಜನೆಗೆ ಸಂಬಂಧಿಸಿದಂತೆ 52 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸಲಿದೆ ಎಂದು ಮಾನವ ಹಕ್ಕು ಹೋರಾಟಗಾರರ ವರದಿಯೊಂದರಿಂದ ಸೋರಿಕೆಯಾದ ಮಾಹಿತಿ ತಿಳಿಸಿದೆಯೆಂದು ಎಬಿಸಿ ಸುದ್ದಿ ಸಂಸ್ಥೆ ತಿಳಿಸಿದೆ.
ಅದಾನಿ ಪೋರ್ಟ್ಸ್ ಸಂಸ್ಥೆಯ ಮುಖ್ಯಸ್ಥರು ಜುನ್ತಾ ಸಂಸ್ಥೆಯ ಉನ್ನತ ಅಧಿಕಾರಿಯನ್ನು 2019ರಲ್ಲಿ ಭೇಟಿಯಾಗಿದ್ದಾರೆಂದು ತೋರಿಸುವ ವೀಡಿಯೋ ಮತ್ತು ಫೋಟೋಗಳು ಲಭ್ಯವಿವೆಯೆನ್ನಲಾಗಿದೆ. ತಾನು ಯಾವತ್ತೂ ಮ್ಯಾನ್ಮಾರ್‍ನ ಮಿಲಿಟರಿ ನಾಯಕತ್ವದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅದಾನಿ ಸಂಸ್ಥೆ ಕಳೆದ ತಿಂಗಳು ನೀಡಿದ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮ್ಯಾನ್ಮಾರ್ ಇಕನಾಮಿಕ್ ಕೊ-ಆಪರೇಶನ್ ಅಮೆರಿಕಾ ಸರಕಾರದ ನಿರ್ಬಂಧ ಎದುರಿಸುತ್ತಿದೆ. ಆದರೂ ಜಮೀನು ಲೀಸ್ ಶುಲ್ಕವಾಗಿ ಅದಾನಿ ಸಮೂಹದ ಅಂಗ ಸಂಸ್ಥೆಯು ಮ್ಯಾನ್ಮಾರ್ ಇಕನಾಮಿಕ್ ಕೊ-ಆಪರೇಷನ್‍ಗೆ 30 ಮಿಲಿಯನ್ ಡಾಲರ್ ಪಾವತಿಸಲಿದೆ ಎಂದು ಯಾಂಗೊನ್ ರೀಜನ್ ಇನ್ವೆಸ್ಟ್‍ಮೆಂಟ್ ಕಮಿಷನ್‍ನ ಸೋರಿಕೆಯಾದ ದಾಖಲೆಗಳು ತಿಳಿಸುತ್ತಿವೆ.
ಇದರ ಹೊರತಾಗಿ ಜಮೀನು ಕ್ಲಿಯರೆನ್ಸ್ ಶುಲ್ಕವಾಗಿ 32 ಮಿಲಿಯನ್ ಅಮೆರಿಕನ್ ಡಾಲರ್ ಹಣ ಕೂಡ ಎಂಇಸಿಗೆ ಅದಾನಿ ಸಂಸ್ಥೆಯಿಂದ ದೊರೆಯುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯನ್ ಸೆಂಟರ್ ಫಾರ್ ಇಂಟರ್ ನ್ಯಾಶನಲ್ ಜಸ್ಟಿಸ್ ಹಾಗೂ ಜಸ್ಟಿಸ್ ಫಾರ್ ಮ್ಯಾನ್ಮಾರ್ ಜಂಟಿ ವರದಿ ತಿಳಿಸಿದೆ.
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನ ಕಾರ್ಮಿಕೇಲ್ ಕಲ್ಲಿದ್ದಲು ಯೋಜನೆ ಜತೆಗೆ ನಂಟು ಹೊಂದಿರುವ ಕಂಪೆನಿ ಜತೆಗೆ ಮ್ಯಾನ್ಮಾರ್ ಮಿಲಿಟರಿಯ ಸಂಬಂಧ ದೃಢಗೊಂಡಿದೆ ಎಂದು ವರದಿ ಪುಷ್ಠೀಕರಿಸಿದ್ದಾಗಿ ಆಸ್ಟ್ರೇಲಿಯಾದ ವಕೀಲೆ ಕ್ರಿಸ್ ಸಿದೊಟಿ ಹೇಳಿದ್ದಾರೆ.
ಆದರೆ ಮ್ಯಾನ್ಮಾರ್ ಕಂಟೇನರ್ ಪೋರ್ಟ್ ಯೋಜನೆಗೆ ಸಂಬಂಧಿಸಿದಂತೆ ಮಿಲಿಟರಿ ನಾಯಕತ್ವದ ಜತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅದಾನಿ ಸಮೂಹ ಹೇಳಿದ್ದರೂ ಅದಾನಿ ಪೋರ್ಟ್ಸ್ ಚೀಫ್ ಎಕ್ಸಿಕ್ಯುಟಿವ್ ಕರಣ್ ಅದಾನಿ ಅವರು ಸಂಸ್ಥೆಯ ಉನ್ನತಾಧಿಕಾರಿ ಮಿನ್ ಔಂಗ್ ಹ್ಲ್ಯಾಂಗ್ ಅವರನ್ನು ಜುಲೈ 2019ರಲ್ಲಿ ಭೇಟಿಯಾಗಿದ್ದರು. ಮಿನ್ ಔಂಗ್ ಅವರು ಯುದ್ಧಾಪರಾಧದ ಆರೋಪ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮಿನ್ ಔಂಗ್ ಅವರ ಮೇಲೆ ಪ್ರಯಾಣ ನಿರ್ಬಂಧವನ್ನು ಅಮೆರಿಕಾ ವಿಧಿಸಿದ ನಂತರ ಈ ಭೇಟಿ ನಡೆದಿತ್ತು ಎಂದು ಹೇಳಲಾಗಿದೆ. ಮಿನ್ ಔಂಗ್ ಅವರು ಗುಜರಾತ್‍ನ ಮುಂದ್ರಾ ಬಂದರಿಗೆ ಭೇಟಿ ನೀಡಿದ ವೇಳೆ ಕರಣ್ ಅದಾನಿ ಅವರ ಜತೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಕುರಿತಾದ ವೀಡಿಯೋವನ್ನು ಮ್ಯಾನ್ಮಾರ್‍ನ ಮಿಲಿಟರಿ ತನ್ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಅಪ್ಲೋಡ್ ಮಾಡಿದೆ. ಆದರೆ ಅವರು ಭಾರತ ಸರಕಾರ ಪ್ರವರ್ತಿತ ಭೇಟಿ ಭಾಗವಾಗಿ ಮುಂದ್ರಾ ಬಂದರಿಗೆ ಭೇಟಿ ನೀಡಿದ್ದರು ಎಂದು ಅದಾನಿ ಪೋರ್ಟ್ಸ್ ವಕ್ತಾರರು ಹೇಳಿದ್ದಾರೆ.