ಕಸಾಪ ಚುನಾವಣೆ: ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಾಸ್ರಿ ನಾಮಪತ್ರ ಸಲ್ಲಿಕೆ

ಉಡುಪಿ, ಮಾ.30: ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ 2021ರ ಉಡುಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್. ಮಂಗಳವಾರ ಉಡುಪಿ ಮಿನಿವಿಧಾನ ಸೌಧದಲ್ಲಿ ಚುನಾವಣಾಧಿಕಾರಿ ಪ್ರದೀಪ್ ಕುರ್ಡೆಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್., ಕೇಂದ್ರ ಪರಿಷತ್ತಿನಲ್ಲಿರುವಂತೆ ಜಿಲ್ಲೆಯಲ್ಲಿಯೂ ಒಂದು ವ್ಯಕ್ತಿಗೆ ಒಂದು ಅವಧಿಗೆ ಮಾತ್ರ ಅಧ್ಯಕ್ಷರಾಗುವ ಬಗ್ಗೆ ಚಿಂತನೆ ನಡೆ ಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಾಹಿತಿಗಳು, ಕನ್ನಡ ಭಾಷಾ ಪಂಡಿತರು, ಕಲಾವಿದರು, ಸಂಘಟಕರನ್ನೊಳಗೊಂಡ ವಿದ್ವತ್ ಕೂಟ ರಚಿಸಲಾ ಗುವುದು. ಏಳು ವರ್ಷ ಗಳಿಂದ ನನೆಗುದಿಗೆ ಬಿದ್ದಿರುವ ಕನ್ನಡ ಭವನವನ್ನು ನಿರ್ಮಿಸಲಾಗುವುದು ಎಂದರು.
ಜಿಲ್ಲೆಯ ಕೇಂದ್ರ ಭಾಗದಲ್ಲಿ ಸುಸಜ್ಜಿತ ಕಚೇರಿ ನಿರ್ಮಾಣ, ಉದಯೋನ್ಮುಖ ಲೇಖಕರು, ಕವಿಗಳು, ಕಲಾವಿದರ ಗುರುತಿಸಿ ಉತ್ತೇಜಿಸಲಾ ಗುವುದು. ಕನ್ನಡ ಮಾಧ್ಯಮಾ ಶಾಲೆಗಳ ಉಳಿವಿಗೆ ನಿರಂತ ಪ್ರಯತ್ನ ಮಾಡಲಾಗುವುದು. ಜಿಲ್ಲಾ, ತಾಲೂಕು, ಹೋಬಳಿಮಟ್ಟದಲ್ಲಿ ಸಮರ್ಥ ಕಾರ್ಯಪಡೆ ರಚಿಸಿ, ಪರಿಷತ್ತಿನ ಚಟುವಟಿಕೆಗಳ ನಿತ್ಯ ನೂತನವಾಗಿರುವಂತೆ ಶ್ರಮಿಸಲಾಗುವುದು. ಸಮಾನ ಮನಸ್ಕ ಇತರ ಸಂಘಟನೆ ಗಳೊಂದಿಗೆ ಸೇರಿಸಿ ಅರ್ಥ ಪೂರ್ಣ ಕಾರ್ಯಕ್ರಮ ಗಳನ್ನು ಆಯೋಜಿಸುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಸ್ಯ ಸಾಹಿತಿ ಕುಗೋ, ಲೇಖಕರಾದ ಕೆ.ಎಸ್. ಕಾರಂತ್, ಹಿರಿಯರಾದ ಎಸ್.ವಿ.ಭಟ್, ನಾರಾಯಣ ಖಾರ್ವಿ, ನಿತ್ಯಾನಂದ ಶೆಟ್ಟಿ, ವಿಜಯ ಕುಮಾರ್ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.







