ಫರಂಗಿಪೇಟೆ ಮಸೀದಿಯ ಮುಅಝ್ಝಿನ್‌ಗೆ ಹಲ್ಲೆ: ಖಂಡನೆ
ಮಂಗಳೂರು, ಮಾ.30: ಫರಂಗಿಪೇಟೆಯ ಬಿರ್ರುಲ್ ವಾಲಿದೈನ್ ಮಸೀದಿಯೊಳಗೆ ಸೋಮವಾರ ತಡ ರಾತ್ರಿ ದುಷ್ಕರ್ಮಿಗಳು ನುಗ್ಗಿ ಮುಅಝ್ಝಿನ್‌ರ ಮೇಲೆ ಹಲ್ಲೆ ನಡೆಸಿ ಮತೀಯ ಸೌಹಾರ್ದ ಕೆಡಿಸುವ ಹುನ್ನಾರ ಮಾಡಿದ್ದಾರೆ. ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿ ಜನರ ಭಾವನೆಗಳನ್ನು ಕೆರಳಿಸಿ, ಕೋಮುಗಲಭೆಗೆ ಪ್ರಚೋದನೆ ನೀಡುವುದು ದುಷ್ಕರ್ಮಿಗಳ ಉದ್ದೇಶವಾಗಿದೆ. ಈ ಕೃತ್ಯ ಖಂಡನೀಯ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ಮತ್ತು ಮಾನವ್ ಸಮಾನತಾ ಮಂಚ್‌ನ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಇಂತಹ ಹಲವು ಕೃತ್ಯಗಳು ಅಲ್ಲಲ್ಲಿ ಕಾಣಿಸುತ್ತಿವೆ. ಮೊದಲೇ ಕೋಮುಸೂಕ್ಷ್ಮವಾದ ಈ ಜಿಲ್ಲೆಯಲ್ಲಿ ಇದರಿಂದಾಗಿ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗುತ್ತಿವೆ. ಹಾಗಾಗಿ ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Next Story





