ಸಿಡಿ ಪ್ರಕರಣದಲ್ಲಿ ಸಿಎಂ ಪುತ್ರ ವಿಜಯೇಂದ್ರ- ಡಿಕೆಶಿ ಕೈವಾಡ: ಶಾಸಕ ಯತ್ನಾಳ್ ಗಂಭೀರ ಆರೋಪ
''ಯಡಿಯೂರಪ್ಪ ಸರಕಾರ ಮೇ 2ಕ್ಕೆ ಅಂತ್ಯವಾಗಲಿದೆ''

ವಿಜಯಪುರ, ಮಾ.30: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಬ್ಬರ ಕೈವಾಡ ಇರುವುದರಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡಿಕೆಶಿ ಮೇಲೆ ಸಾಫ್ಟ್ ಕಾರ್ನರ್ ಇದೆ ಎಂದು ಹೇಳಿದರು.
ಬಿಎಸ್‍ವೈ ಅವರು ಡಿಕೆಶಿ ವಿರುದ್ಧ ಮಾತಾಡುತ್ತಿಲ್ಲ. ಎಸ್‍ಐಟಿ ತನಿಖೆ ಮೇಲೆ ವಿಶ್ವಾಸವಿಲ್ಲ, ಸಿಬಿಐ ತನಿಖೆಯಾದರೆ ಸಿಡಿ ಗ್ಯಾಂಗ್ ಬಯಲಾಗಲಿದೆ. ಅವರ ರಾಜಕೀಯ ವೈಷಮ್ಯದಿಂದ ಈ ರೀತಿ ಆಗಿದೆ. ಇದಕ್ಕೊಂದು ಅಂತ್ಯ ಬೇಕಿದೆ ಎಂದು ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಇಂಥದೊಂದು ಕೆಟ್ಟ ಸಂಪ್ರದಾಯ ಪ್ರಾರಂಭವಾದರೆ ಒಳಿತಲ್ಲ. ಇಂಥವರು ರಾಜಕೀಯಕ್ಕೆ ಬಂದರೆ ಭ್ರಷ್ಟಾಚಾರ, ಗೂಂಡಾಗಿರಿ ಹೆಚ್ಚಾಗುತ್ತದೆ. ಇದೆಲ್ಲದಕ್ಕೂ ಒಂದು ಅಂತ್ಯ ಆಗಬೇಕಿದೆ. ಡಿಕೆಶಿ ನನಗೆ ರಕ್ಷಣೆ ಕೊಟ್ಟಿದ್ದಾರೆ ಎಂದು ಸ್ವತಃ ಸಂತ್ರಸ್ತೆ ಯುವತಿ ಹೇಳುತ್ತಾಳೆ. ಸಿಎಂ ಹಾಗೂ ಡಿಕೆಶಿ ಅವರ ಒಳ ಒಪ್ಪಂದವಿದೆ ಎಂದು ಆರೋಪಿಸಿದರು.
ಡಿಕೆಶಿ ಬಳಿ ಇವರದ್ದು ಇದೆ ಇವರದೆಲ್ಲ ಅವರ ಬಳಿ ಇವೆ. ಇವರಿಬ್ಬರ ಒಪ್ಪಂದದ ಹಿನ್ನೆಲೆ ಇಂದು ಡಿಕೆಶಿ ಬಗ್ಗೆ ಸಿಎಂ ಸಾಫ್ಟ್ ಆಗಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ 25 ಸಾವಿರ ಕೋಟಿ ಕೊಡುತ್ತೇನೆ ಎಂದು 6.5 ಸಾವಿರ ಕೋಟಿ ಕೊಟ್ಟರು. ಸದನದಲ್ಲಿ ಯಾವುದೇ ಅಭಿವೃದ್ಧಿ ಪರವಾದ ಚರ್ಚೆಗಳಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದ ಜಿಗಜಿಣಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್ ಯಾವಾಗಾದರೂ ಒಮ್ಮೆ ಎದ್ದು ಭೂತನಂತೆ ಮಾತನಾಡುವವರ ಬಗ್ಗೆ ನನಗೇನು ಕೇಳಬೇಡಿ. ರಾಜ್ಯದಲ್ಲಿ ಪೊಲೀಸ್ ಇಲಾಖೆ ವಿಫಲವಾಗಿಲ್ಲ. ಸರಕಾರ ಪೊಲೀಸ್ ಇಲಾಖೆ ಮೇಲೆ ಸುಮ್ಮನೆ ಒತ್ತಡ ಹಾಕುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದರು.
ಬಿಎಸ್‍ವೈ ಸರಕಾರ ಮೇ 2ಕ್ಕೆ ಅಂತ್ಯ
ಶಾಸಕ ರೇಣುಕಾಚಾರ್ಯ ಒಬ್ಬರನ್ನು ಬಿಟ್ಟರೆ ನನ್ನ ವಿರುದ್ಧ ಯಾರೂ ಮಾತನಾಡುವುದಿಲ್ಲ. ಬಿಜೆಪಿ ಸರಕಾರ 5 ವರ್ಷ ಇರುತ್ತದೆ. ಆದರೆ, ಯಡಿಯೂರಪ್ಪ ನೇತೃತ್ವದ ಸರಕಾರ ಇರಲ್ಲ. ಮೇ 2ಕ್ಕೆ ಇದು ಅಂತ್ಯವಾಗಲಿದೆ.
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ







