ಕೋವಿಡ್ ನಿಯಮದೊಂದಿಗೆ ಧಾರ್ಮಿಕ ಕಾರ್ಯಕ್ರಮ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ
ಮಂಗಳೂರು, ಮಾ.30: ಕೋವಿಡ್-19ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ದ.ಕ.ಜಿಲ್ಲಾಧಿಕಾರಿ ಈಗಾಗಲೆ ಹೊರಡಿಸಿ ರುವ ಆದೇಶದಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯೊಂದನ್ನು ನೀಡಿ ಕೋವಿಡ್ -19 ನಿಯಮದೊಂದಿಗೆ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮ ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೆ ಹಮ್ಮಿಕೊಂಡಿರುವ ಯಕ್ಷಗಾನ, ಕೋಲ, ನೇಮ, ಪೂಜೆ, ಪುನಸ್ಕಾರಗಳು ಮತ್ತು ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್-19 ನಿಯಮದಂತೆ ನಡೆಸಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಮರುಸ್ಪಷ್ಟನೆ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಬಯಲು/ಮೈದಾನ ಪ್ರದೇಶದಲ್ಲಿ ಗರಿಷ್ಠ 500ಕ್ಕಿಂತ ಅಧಿಕ ಜನರು ಸೇರುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರ ಕಾಪಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
Next Story





