ವಿಟಿಯು ಪರೀಕ್ಷೆ : 13 ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದ ಅಸ್ಮತ್ ಶರ್ಮೀನ್
ಸಹ್ಯಾದ್ರಿ ಕಾಲೇಜಿಗೆ ಎರಡು ರ್ಯಾಂಕ್

ಅಸ್ಮತ್ ಶರ್ಮೀನ್
ಮಂಗಳೂರು, ಮಾ.30: ಬೆಳಗಾವಿಯ ವಿಟಿಯು ನಡೆಸಿದ ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ನಗರದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನ ವಿದ್ಯಾರ್ಥಿನಿ ಅಸ್ಮತ್ ಶರ್ಮೀನ್ ಟಿಎಸ್ 13 ಚಿನ್ನದ ಪದಕಗಳೊಂದಿಗೆ 1ನೇ ರ್ಯಾಂಕ್ ಮತ್ತು ಎಂಬಿಎ ವಿದ್ಯಾರ್ಥಿ ಧೀರಜ್ ಎಂ 8ನೇ ರ್ಯಾಂಕ್ ಪಡೆದಿದ್ದಾರೆ.
2019-20ನೇ ಶೈಕ್ಷಣಿಕ ವರ್ಷದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಅಸ್ಮತ್ ಶರ್ಮೀನ್ ಟಿಎಸ್ 1ನೇ ರ್ಯಾಂಕ್ನೊಂದಿಗೆ 9.42ರ ಸಿಜಿಪಿಎ ಗಳಿಸುವ ಮೂಲಕ ಶ್ರೇಯಾಂಕವನ್ನು ಪಡೆದಿದ್ದಾರೆ. ಅಲ್ಲದೆ 13 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಇದು ಒಬ್ಬ ವಿದ್ಯಾರ್ಥಿಯು ಗೆದ್ದ ಅತೀ ಹೆಚ್ಚು ಚಿನ್ನದ ಪದಕವಾಗಿದೆ ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.
2021ರ ಎ.3ರಂದು ಬೆಳಗಾವಿಯ ವಿಟಿಯುನಲ್ಲಿ ನಡೆಯಲಿರುವ 20ನೇ ವಾರ್ಷಿಕ ಸಮಾವೇಶದಲ್ಲಿ ರಾಜ್ಯಪಾಲ ವಾಜುಭಾಯ್ ವಾಲಾ ಅವರಿಂದ ಪದವಿ ಮತ್ತು ಪದಕಗಳನ್ನು ಸ್ವೀಕರಿಸಲಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ (ವಿಟಿಯು)ಯ 203 ಅಂಗಸಂಸ್ಥೆ ಸಂಸ್ಥೆಗಳಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಅಸ್ಮತ್ ಶರ್ಮೀನ್ ಟಿಎಸ್ ಅವರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ನ ಹಿರಿಮೆ ಹೆಚ್ಚಿಸಿದ್ದಾರೆ.
ಕಾಸರಗೋಡಿನ ಶರೀಫ್ ಮತ್ತು ಶಹೀದಾ ದಂಪತಿಯ ಪುತ್ರಿಯಾಗಿರುವ ಅಸ್ಮತ್ ಶರ್ಮೀನ್ ಟಿಎಸ್ ಪಡೆದ ಚಿನ್ನದ ಪದಕಗಳಲ್ಲಿ ನಿಜಗುನಪ್ಪಗುರುಲಿಂಗಪ್ಪಹಕ್ಕಪಕ್ಕಿ ಚಿನ್ನದ ಪದಕ, ಆರ್.ಎನ್.ಶೆಟ್ಟಿ ಚಿನ್ನದ ಪದಕ, ಸರ್ ಎಂ. ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್ ಚಿನ್ನದ ಪದಕ, ಎನ್. ಕೃಷ್ಣಮೂರ್ತಿ ಸ್ಮಾರಕ ಚಿನ್ನದ ಪದಕ, ಜೈನ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಡಾ.ಎಂ.ಸಿ.ಶ್ರೀನಿವಾಸ್ ಮೂರ್ತಿ ಸ್ಮಾರಕ ನಗದು ಪ್ರಶಸ್ತಿ, ಇಂಜಿನಿಯರ್ ಎಚ್ಎಸ್ ಸಿದ್ದಲಿಂಗಯ್ಯ ಸಿವಿಲ್ ಇಂಜಿನಿಯರಿಂಗ್ ಸ್ಮಾರಕ ನಗದು ಪ್ರಶಸ್ತಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಿಲ್ವರ್ ಜುಬಿಲಿ ಚಿನ್ನದ ಪದಕ, ಜ್ಯೋತಿ ಚಿನ್ನದ ಪದಕ, ಮೂರ್ತಿ ಪದಕ ಶ್ರೇಷ್ಠತೆ, ಎಸ್ಜಿ ಬಾಲೇಕುಂಡ್ರಿ ಚಿನ್ನದ ಪದಕ, ವಿಟಿಯು ಚಿನ್ನದ ಪದಕ ಮತ್ತು ಡಾ. ಮಾಲತಿ ಕೇಸರಿ ಚಿನ್ನದ ಪದಕ ಸೇರಿವೆ.

ಧೀರಜ್
ಜನಾರ್ದನ ರೈ ಮತ್ತು ಕಾಸರಗೋಡಿನ ರೇವತಿ ರೈ ದಂಪತಿಯ ಪುತ್ರನಾಗಿರುವ ಎಂಬಿಎ ವಿದ್ಯಾರ್ಥಿ ಧೀರಜ್ 8ನೇ ರ್ಯಾಂಕ್ ಪಡೆದಿದ್ದಾರೆ. 8.57ರ ಸಿಜಿಪಿಎ ಗಳಿಸಿರುವ ಧೀರಜ್ ಪ್ರಸ್ತುತ ಕೆಪಿಎಂಜಿ ಜಿಡಿಸಿಯಲ್ಲಿ ಆಡಿಟ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.







