ಮಣಿಪಾಲ: ಮಾಂಡವಿ ಎಮರಾಲ್ಡ್ ವಸತಿ ಸಂಕೀರ್ಣ ಕಂಟೈನ್ಮೆಂಟ್ ವಲಯ

ಸಾಂದರ್ಭಿಕ ಚಿತ್ರ
ಮಣಿಪಾಲ : 35 ಮಂದಿ ಕೋವಿಡ್-19 ಸೋಂಕಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲದ ಮಾಂಡವಿ ಎಮರಾಲ್ಡ್ ವಸತಿ ಸಂಕೀರ್ಣವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿದ್ದು, ಇಡೀ ಪ್ರದೇಶವನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಿಸಿದೆ.
ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಜಿಲ್ಲಾದಿಕಾರಿ ಕಚೇರಿಗೆ ತೆರಳುವ ರಸ್ತೆಯ ಪಕ್ಕದಲ್ಲಿರುವ ಮಾಂಡವಿ ಎಮರಾಲ್ಡ್ ವಸತಿ ಸಮುಚ್ಚಯದಲ್ಲಿ ಮಣಿಪಾಲದ ವಿವಿಧ ವೃತ್ತಿಪರ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಂಐಟಿ ಕ್ಯಾಂಪಸ್ ಬಳಿಕ ಇದೀಗ ಈ ವಸತಿ ಸಂಕೀರ್ಣ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಇಲ್ಲಿನ ನಿವಾಸಿಗಳಲ್ಲಿ ಅಧಿಕ ಸಂಖ್ಯೆಯ ಮಂದಿ ಕೊರೋನಕ್ಕೆ ಪಾಸಿಟಿವ್ ಬರುತಿದ್ದು, ಈಗಾಗಲೇ ಇಂದು ಒಟ್ಟು 35 ಪ್ರಕರಣಗಳು ಪಾಸಿಟಿವ್ ಆಗಿ ಬಂದಿವೆ. ಇಡೀ ವಸತಿ ಸಂಕೀರ್ಣದ ಎಲ್ಲರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಡಿಎಚ್ಓ ತಿಳಿಸಿದರು.
ಮಾಂಡವಿ ಎಮರಾಲ್ಡ್ನ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ರಸ್ತೆ, ಪಶ್ಚಿಮದಲ್ಲಿ ತೆರೆದ ಪ್ರದೇಶ, ಉತ್ತರದಲ್ಲಿ ಮಾಂಡವಿ ಪರ್ಲ್ ಸಿಟಿ ಬಿಲ್ಡಿಂಗ್ ಹಾಗೂ ದಕ್ಷಿಣದಲ್ಲಿ ರಾಯಲ್ ಎಂಬೆಸಿ ಬಿಲ್ಡಿಂಗ್ ನಡುವಿನ ಪ್ರದೇಶವನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಅದೇ ರೀತಿ ಎಂಸಿಎಚ್ಪಿ ಕಾಲೇಜ್ ಪೂರ್ವದಲ್ಲಿ, ತೆರೆದ ಪ್ರದೇಶ ಪಶ್ಚಿಮದಲ್ಲಿ, ಮಾಂಡವಿ ಪ್ಲಾಜಾ ಉತ್ತರದಲ್ಲಿ, ಓಯೋ ಸ್ಕೈವೇ ಇನ್ ದಕ್ಷಿಣದಲ್ಲಿ ಬಫರ್ ರೆನ ವ್ಯಾಪ್ತಿಯಾಗಿರುತ್ತದೆ. ಕುಂದಾಪುರದ ಎಸಿ ರಾಜು ಕೆ. ಅವರನ್ನು ಇದಕ್ಕೆ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಶಂಕರನಾರಾಯಣದಲ್ಲಿ 18 ಪಾಸಿಟಿವ್: ಕುಂದಾಪುರ ತಾಲೂಕು ಶಂಕರನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ 18 ಮಂದಿ ವಿದ್ಯಾರ್ಥಿಗಳು ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ಇವರೆಲ್ಲರನ್ನೂ ಕ್ವಾರಂಟೈನ್ನಲ್ಲಿರಿಸಲಾಗಿದೆ. ಅಲ್ಲದೇ ಈ ವಿದ್ಯಾರ್ಥಿಗಳ 146 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಅವರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಶಾಲೆಯನ್ನು ಮುಚ್ಚಿಲ್ಲ ಎಂದವರು ತಿಳಿಸಿದರು.







