ಯಾರಿಂದಲೂ ಸಲಹೆ ಪಡೆಯದೆ ʼಲಾಕ್ ಡೌನ್ʼ ಹೇರಿದ್ದ ಪ್ರಧಾನಿ ಮೋದಿ: ಬಿಬಿಸಿ ವರದಿ

ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತ ದೇಶದಲ್ಲಿ ಕೊರೋನ ಕಾರಣದಿಂದ ಲಾಕ್ ಡೌನ್ ಹೇರಿರುವ ಕಾರಣದಿಂದ ದೇಶಾದ್ಯಂತ ಹಲವಾರು ಮಂದಿ ಕಷ್ಟಕ್ಕೀಡಾಗಿದ್ದು ಮಾತ್ರವಲ್ಲದೇ ಪ್ರಾಣ ಕಳೆದುಕೊಂಡಿದ್ದರು. ಈ ಕುರಿತಾದಂತೆ ವರದಿ ಪ್ರಕಟಿಸಿರುವ ಅಂತಾರಾಷ್ಟ್ರೀಯ ಮಾಧ್ಯಮ ಬಿಬಿಸಿ, "ಲಾಕ್ ಡೌನ್ ಹೇರುವ ಮುಂಚೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ತಜ್ಞರು ಅಥವಾ ಪರಿಣಿತರ ಸಲಹೆ ಪಡೆದಿರಲಿಲ್ಲ" ಎಂದು ವರದಿ ಮಾಡಿದೆ.
ಬಿಬಿಸಿಯು ಒಟ್ಟು 240ಕ್ಕೂ ಹೆಚ್ಚು ಆರ್ಟಿಐ ಅರ್ಜಿಯನ್ನು ಸರಕಾರದ ವಿವಿಧ ಇಲಾಖೆಗಳಿಗೆ ಹಾಕಿತ್ತು. ಇದಕ್ಕೆ ಸಿಕ್ಕ ಉತ್ತರಗಳಲ್ಲಿ ʼಪ್ರಧಾನಿ ಮೋದಿಯು ಲಾಕ್ ಡೌನ್ ಸಂಬಂಧಿಸಿ ಯಾರನ್ನೂ ಸಂಪರ್ಕಿಸಿರಲಿಲ್ಲ ಎನ್ನುವುದು ನಿಚ್ಚಳವಾಗಿದೆʼ ಎಂದು ವರದಿ ತಿಳಿಸಿದೆ. ಭಾರತೀಯ ಗೃಹ ಇಲಾಖೆಯು ಈ ಸಂಬಂಧ ಹಲವು ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಿತ್ತು ಮತ್ತು ಹಾರಿಕೆಯ ಉತ್ತರ ನೀಡಿ ಮುಂದುವರಿಯಲು ಪ್ರಯತ್ನಿಸಿತ್ತು ಎಂದು ವರದಿ ಉಲ್ಲೇಖಿಸಿದೆ.
ಎಲ್ಲಾ ದೇಶಗಳಿಗಿಂತ ಬೇಗನೇ ಭಾರತ ಲಾಕ್ ಡೌನ್ ಹೇರಿತ್ತು. 519 ಪ್ರಕರಣಗಳು ಮತ್ತು 9 ಮಂದಿ ಮೃತಪಟ್ಟ ಸಂದರ್ಭದಲ್ಲಿ ಲಾಕ್ ಡೌನ್ ಹೇರಲಾಗಿತ್ತು. 68 ದಿನಗಳ ಮುಚ್ಚುಗಡೆಯನ್ನು ಆಕ್ಸ್ ಫರ್ಡ್ ಯುನಿವರ್ಸಿಟಿಯು "ವಿಶ್ವದಲ್ಲೇ ಕಟ್ಟುನಿಟ್ಟಾದ ಲಾಕ್ ಡೌನ್" ಎಂದು ಬಣ್ಣಿಸಿದೆ.
ಲಾಕ್ ಡೌನ್ ನಲ್ಲಿ ಹೆಚ್ಚಾಗಿ ಪೀಡಿತರಾಗಿದ್ದು, ಬಡವರು, ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಸ್ಥರಾಗಿದ್ದಾರೆ. ಆಕಸ್ಮಿಕವಾಗಿ ಅವರ ಕೆಲಗಳೆಲ್ಲಾ ನಿಂತು ಹೋದ ಬಳಿಕ ಅವರು ಚಿಂತಾಕ್ರಾಂತರಾಗಿದ್ದರು. ಮಾತ್ರವಲ್ಲದೇ ವಲಸೆ ಕಾರ್ಮಿಕರು ಕೂಡಾ ಸಂಕಷ್ಟ ಅನುಭವಿಸಿದ್ದಾರೆ. ಗರ್ಭಿಣಿ ಮಹಿಳೆಯರು, ರೋಗಿಗಳು ಮತ್ತು ಅಪೌಷ್ಠಿಕತೆ ಹೊಂದಿರುವ ಮಕ್ಕಳು ಕೂಡಾ ಕಷ್ಟ ಅನುಭವಿಸಿದ್ದಾಗಿ ವರದಿ ತಿಳಿಸಿದೆ.
ತಜ್ಞರ ಪ್ರಕಾರ "ಸರಿಯಾದ ಸಲಹೆ ಸೂಚನೆ, ಮಾರ್ಗದರ್ಶನಗಳಿಲ್ಲದೇ ಕೈಗೊಂಡ ನಿರ್ಧಾರದಿಂದಾಗಿ ಹಲವು ಸಾವು ನೋವುಗಳು ಸಂಭವಿಸಿತು" ಎಂದು ವರದಿ ತಿಳಿಸಿದೆ.
"ಎಲ್ಲರೊಂದಿಗೆ ಸಮಾಲೋಚಿಸಿದ ನಂತರವೇ ಪ್ರಧಾನಿ ಕಾರ್ಯನಿರ್ವಹಿಸಿದ್ದಾರೆ" ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿಕೆ ನೀಡಿದರೂ, ತಜ್ಞರ ಮತ್ತು ಅಧಿಕೃತರ ಹೇಳಿಕೆಗಳು ವ್ಯತಿರಿಕ್ತವಾಗಿದೆ.
"ಜನವರಿ ತಿಂಗಳಲ್ಲಿ ಕೊರೋನ ವೈರಸ್ ಹರಡಲು ಪ್ರಾರಂಭವಾಯಿತು. ಮಾರ್ಚ್ ೨೦ರಂದು ಲಾಕ್ ಡೌನ್ ಹೇರಲಾಯಿತು. ರಾತ್ರೋರಾತ್ರಿ ಲಾಕ್ ಡೌನ್ ಹೇರಲು ಇದು ಪ್ರವಾಹವೋ, ಅಥವಾ ಭೂಕಂಪವೋ ಅಲ್ಲ. ಸರಿಯಾಗಿ ಸಮಾಲೋಚನೆ ನಡೆಸಿ, ಒಂದಿಷ್ಟು ಸಮಯ ನೀಡಿ, ಎಲ್ಲಾ ಮೂಲೆಗಳಿಂದ ಸಲಹೆಗಳು ಬಂದ ಬಳಿಕ ಲಾಕ್ ಡೌನ್ ಹೇರಬಹುದಿತ್ತು" ಎಂದು ಅಂಜಲಿ ಭಾರದ್ವಾಜ್ ಹೇಳಿಕೆ ನೀಡುತ್ತಾರೆ.
"ಲಾಕ್ ಡೌನ್ ಅನ್ನು ಉತ್ತಮವಾಗಿ ಯೋಜಿಸಲು ಅವಕಾಶವಿತ್ತು. ಇದು ರಾಜ್ಯಗಳು ಮತ್ತು ಜಿಲ್ಲೆಗಳನ್ನು ಅವಲಂಬಿಸಿ ವಿಕೇಂದ್ರೀಕೃತ ನಿರ್ಧಾರವಾಗಿರಬೇಕು. ಸಂಪೂರ್ಣ ಲಾಕ್‌ಡೌನ್ ಅಗತ್ಯವಿರಲಿಲ್ಲ. ಈಗ ಏನಾಗಿದೆ ಎಂಬುದು ಭಾರೀ ಆಘಾತಕರ ವಿಚಾರ. ಏಕೆಂದರೆ ಭಾರತೀಯ ಆರ್ಥಿಕತೆಯೂ ಕೂಡ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾರ್ವಜನಿಕ ನೀತಿ ವಿಶ್ಲೇಷಕ ಪ್ರಿಯ ರಂಜನ್ ದಾಸ್ ಹೇಳುತ್ತಾರೆ.